ಉತ್ತರಮೇರು ಶೋಧನೆ
ಉತ್ತರಮೇರು ಶೋಧನೆ: ಪೂರ್ವ ಏಷ್ಯಾಯದ ಸಂಪದ್ಯುಕ್ತ ರಾಷ್ಟ್ರಗಳಿಗೆ ಹಾದಿ ಕಂಡುಹಿಡಿಯಲು ಐರೋಪ್ಯರು ಪ್ರಯತ್ನಿಸಿದ್ದು ಉತ್ತರಮೇರು ಪ್ರದೇಶಗಳ ಅನ್ವೇಷಣೆ, ಆವಿಷ್ಕಾರ, ಶೋಧನೆಗಳಿಗೆ ಮೂಲಪ್ರೇರಣೆಯಾಯಿತು. ಈ ಉದ್ದೇಶ ಹೊಂದಿದ್ದವರಲ್ಲಿ ಕೆಲವರು ಯೂರೋಪಿನ ಉತ್ತರದ ಕಡೆಯಲ್ಲೇ ಪುರ್ವಾಭಿಮುಖವಾಗಿ ಸಮುದ್ರಯಾನ ಮಾಡಿದರೆ ಇನ್ನು ಕೆಲವರು ಅಟ್ಲಾಂಟಿಕ್ ಸಾಗರದಲ್ಲಿ ಪಶ್ಚಿಮಾಭಿಮುಖವಾಗಿ ಪ್ರಯಾಣ ಮಾಡಿ ಅಮೆರಿಕವನ್ನು ಕಂಡುಹಿಡಿದು ಅನಂತರ ಅಮೆರಿಕದ ಉತ್ತರದ ಕಡೆಯಿಂದ ಪಶ್ಚಿಮಾಭಿಮುಖವಾಗಿ ಈಶಾನ್ಯಕ್ಕೆ ನಡೆದರು. ಆದ್ದರಿಂದ ಇವು ಕ್ರಮವಾಗಿ ಈಶಾನ್ಯಮಾರ್ಗ ಹಾಗೂ ವಾಯವ್ಯ ಮಾರ್ಗಗಳೆಂದು ಪ್ರಸಿದ್ಧವಾಗಿವೆ. ಕ್ರಿಸ್ತಪೂರ್ವ ಕಾಲದಲ್ಲೇ ಗ್ರೀಕರೂ ರೋಮನರೂ ಈ ಪ್ರದೇಶವನ್ನು ಕಂಡಿದ್ದರೆಂದು ಕೆಲವರ ವಾದ. ಗ್ರೀನ್ಲ್ಯೆಂಡಿಗೂ ಅದರ ಎದುರಿಗಿನ ಅಮೆರಿಕನ್ ತೀರಗಳಿಗೂ 10ನೆಯ ಶತಮಾನದಲ್ಲಿ ನಾರ್ಸ್ ಜನ ಮಾಡಿದ ಸಮುದ್ರಯಾನಗಳೂ 1194ರ ಸ್ವಾಲ್ಬಾರ್ ಆವಿಷ್ಕಾರವೂ ಇತಿಹಾಸ ಗುರುತಿಸಬಹುದಾದ ಮೊದಲು ಸಂಗತಿಗಳು. ಉತ್ತರಮೇರು ಪ್ರದೇಶದ ಅಮೆರಿಕನ್ ವಿಭಾಗದ ಶೋಧನೆಯ ಮೊದಲ ಮುಖ್ಯ ಘಟನೆಯೆಂದರೆ 1497ರಲ್ಲಿ ಜಾನ್ ಕ್ಯಾಬಟ್ನಿಂದ ನ್ಯೂಫೌಂಡ್ಲೆಂಡ್ ಮತ್ತು ಲ್ಯಾಬ್ರಡಾರ್ ಶೋಧನೆ. ಅನಂತರ ಇನ್ನು ಕೆಲವರು ಕ್ಯಾಬಟ್ ಅನುಸರಿಸಿದ ಮಾರ್ಗವನ್ನೇ ಮುಂದುವರಿಸಿ ಉ.ಅ. 60ºಯ ಬಳಿಯವರೆಗೂ ಸಾಗಿದರು. ಮುಂದಿನ ಮುಖ್ಯ ಪ್ರವಾಸವೆಂದರೆ ವಿಲೊಬಿಯದು (1553). ಈಶಾನ್ಯ ಮಾರ್ಗವನ್ನಾರಂಭಿಸಿದವ ಈತನೇ. ಆದರೆ ಇವನೂ ಸಂಗಡಿಗರೂ ಲ್ಯಾಪ್ಲ್ಯಾಂಡಿನ ಬಳಿ ಅಳಿದುಹೋದರು. ಮುಂದೆ ಅನೇಕ ಇಂಗ್ಲಿಷರು ವಿಲೊಬಿಯ ಮಾರ್ಗದಲ್ಲೇ ಅನ್ವೇಷಣೆ ಮುಂದುವರಿಸಿದ ರಾದರೂ ಯಾರೂ ಆತ ಕಂಡ ಸ್ಥಳದಿಂದ ಮುಂದೆ ಸಾಗಲಿಲ್ಲ. 1594-97ರಲ್ಲಿ ವಿಲೆಂ ಬಾರೆಂಟ್ಸ್ ಎಂಬ ಡಚ್ ನಾವಿಕ ಮೂರು ಬಾರಿ ಪ್ರವಾಸ ಮಾಡಿ, ಸ್ವಿಟ್ಸ್ಬರ್ಗನನ್ನು ಕಂಡು ಹಿಡಿದ. 1607ರಲ್ಲಿ ಹಡ್ಸನ್ ಉ. ಅ. 81º30ಟ ವರೆಗೂ ಹೋಗಿ ಹಿಂದಿರುಗ ಬೇಕಾಯಿತು. ಪುರ್ವಾಭಿಮುಖವಾಗಿ ಯಾನ ಮಾಡುವುದು ಅಸಾಧ್ಯವೆಂದು ಆ ಯತ್ನವನ್ನು ಕೈಬಿಡಲಾಯಿತು. ಈ ಕಾಲದಲ್ಲಿ ಅಮೆರಿಕನ್ ಉತ್ತರಮೇರು ಪ್ರದೇಶದ ಅನ್ವೇಷಣೆ ಶೋಧನೆಗಳ ಪ್ರಯತ್ನವೂ ಸಾಗಿತ್ತು. ಫ್ರೋಬಿಷರ್ (1576), ಜಾನ್ ಡೇವಿಸ್ (1585-88) ಇವರು ಈ ಕ್ಷೇತ್ರದಲ್ಲಿ ಮೊದಲಿಗರು. ಗ್ರೀನ್ಲ್ಯಾಂಡಿನ ಪಶ್ಚಿಮತೀರದಲ್ಲಿ 70º41'ವರೆಗೂ ಪ್ರಯಾಣ ಮಾಡಿದ ಹಡ್ಸನ್ ವಾಯವ್ಯ ಮಾರ್ಗವನ್ನನುಸರಿಸಿ, ಅವನ ಹೆಸರಿನ ಕೊಲ್ಲಿಯನ್ನು ಕಂಡುಹಿಡಿದ. (ಅದಕ್ಕೆ ಆತನ ಹೆಸರು ಬಂದದ್ದು ಆಮೇಲೆ, ಅದು ಪೆಸಿಫಿಕ್ ಸಾಗರದ ಭಾಗವೆಂದು ಆಗ ಆತ ಭಾವಿಸಿದ್ದ.) ಮುಂದೆ ಬ್ಯಾಫಿನ್, ಫಾಕ್ಸ್, ಜೇಮ್ಸ್ ಮುಂತಾದವರು ಈ ಕಾರ್ಯ ಮುಂದುವರಿಸಿದರು. ಆಮೇಲೆ ಸುಮಾರು ಒಂದು ನೂರು ವರ್ಷ ಕಾಲ ಅಮೆರಿಕನ್ ಉತ್ತರ ಮೇರು ಪ್ರದೇಶದತ್ತ ಯಾರೂ ಗಮನಹರಿಸಲಿಲ್ಲ. ಸೈಬೀರಿಯ ತೀರಪ್ರದೇಶದಲ್ಲಿ ರಷ್ಯಕ್ಕೆ ಬಹಳ ಆಸಕ್ತಿಯಿತ್ತು. 1648ರಲ್ಲಿ ಡೆಷ್ನೆಫ್ ಎಂಬಾತ ಬೇರಿಂಗ್ ಜಲಸಂಧಿಯ ಮೂಲಕ ಹಾದುಹೋದನಾದರೂ ವಾಸ್ತವವಾಗಿ ಈ ಜಲಸಂಧಿಯ ಶೋಧನೆ ನಡೆಸಿದವ ಬೇರಿಂಗನೇ--ಒಂದು ಶತಮಾನ ಕಳೆದ ಮೇಲೆ. ಈ ಸಂಧಿಗೆ ಈತನ ಹೆಸರೇ ಬಂದಿದೆ. ಈತನು 1741ರಲ್ಲಿ ವಾಯವ್ಯ ಅಮೆರಿಕದ ಒಂದು ಭಾಗದ ಶೋಧನೆ ಮಾಡಿದ. ಸೈಬೀರಿಯದ ಉತ್ತರದ ತುದಿಯನ್ನು ಕಂಡುಹಿಡಿದವ ಚಿಲ್ಯೂಸ್ಕಿನ್. ಇದಕ್ಕೆ ಈತನ ಹೆಸರೇ ಬಂದಿದೆ. ಮುಂದೆ ಅನೇಕ ರಷ್ಯನರು ಈ ಭಾಗಗಳ ಪರಿಶೋಧನೆಯ ಕಾರ್ಯ ಮುಂದುವರಿಸಿದರು. ಉತ್ತರದ ಮೇರು ಪ್ರದೇಶದ ಶೋಧನೆಯಲ್ಲಿ ಇಂಗ್ಲಿಷರಿಗೆ ಮತ್ತೆ ಆಸಕ್ತಿ ಹುಟ್ಟಿದ್ದು ಹದಿನೆಂಟನೆಯ ಶತಮಾನದಲ್ಲಿ. ಜೆ.ಸಿ.ಫಿಪ್ಸ್ (ಮುಂದೆ ಲಾರ್ಡ್ ಮಲ್ಗ್ರೇರ್) 1773ರಲ್ಲಿ ಸ್ವಿಟ್ಸ್ ಬರ್ಗನಿಗೆ ಯಾನ ಮಾಡಿ ಅಲ್ಲಿಂದ ಉ.ಅ. 80º48'ವರೆಗೂ ಹೋದ. ಬೇರಿಂಗ್ ಜಲಸಂಧಿಯ ಮೂಲಕ ಯಾನ ಮಾಡಿದ ಜೇಮ್ಸ್ ಕುಕ್ ಅಷ್ಟೊಂದು ಉತ್ತರಕ್ಕೆ ಹೋಗಲಾಗ ಲಿಲ್ಲ. ಈತನ ವೈಫಲ್ಯದಿಂದ ಈ ಪ್ರಯತ್ನ ತಾತ್ಕಾಲಿಕವಾಗಿ ನಿಂತಿದ್ದು 1806ರಲ್ಲಿ ಮತ್ತೆ ಪ್ರಾರಂಭವಾಯಿತು. ಸ್ಕೋರ್ಸ್ ಬಿ ಗ್ರೀನ್ಲ್ಯಾಂಡಿನ ಪೂರ್ವತೀರದಲ್ಲಿ ಸಂಚರಿಸಿ, ಉ.ಅ. 81º30' ವರೆಗೂ ಪ್ರಯಾಣ ಮಾಡಿದ. ಉತ್ತರಮೇರು ಪ್ರದೇಶದ ಭೂವಿವರಣೆ ಹಾಗೂ ಪ್ರಾಕೃತಿಕ ಇತಿಹಾಸದ ಬಗ್ಗೆ ಹೆಚ್ಚು ಮಾಹಿತಿ ಒದಗಿಸಿದವ ಈತನೇ. ಮುಂದೆ ಅನೇಕರು ಈ ಪ್ರದೇಶದ ಶೋಧನೆಯಲ್ಲಿ ನಿರತರಾದರೂ ಸ್ಕೋರ್ಸ್ ಬಿ ಮುಟ್ಟಿದ ಅಕ್ಷಾಂಶಕ್ಕಿಂತಲೂ ಮುಂದೆ (82º43') ಸಾಗಿದವ ಪ್ಯಾರಿ (1827). ಪೌರಸ್ತ್ಯ ರಾಷ್ಟ್ರಗಳಿಗೆ ವಾಯವ್ಯ ಮಾರ್ಗ ಕಂಡುಹಿಡಿಯುವ ಪ್ರಯತ್ನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬ್ರಿಟನ್ನು 20,000 ಪೌ. ಬಹುಮಾನ ನೀಡುವುದಾಗಿ ಪ್ರಕಟಿಸಿತ್ತಾದರೂ ಯಾರೂ ಈ ಬಗ್ಗೆ ಹೆಚ್ಚು ಯಶಸ್ಸು ಗಳಿಸಿರಲಿಲ್ಲ. ಪ್ಯಾರಿ ಈ ನಿಟ್ಟಿನಲ್ಲಿ ಸಾಕಷ್ಟು ದೂರ ಸಾಗಿ ಪ. ರೇ. 110ºಯವರೆಗೂ ಹೋದ, ಅನಂತರ ಟರ್ನಗೇನ್ ಬಿಂದುವಿಗೆ 320 ಕಿಮೀ. ವರೆಗೂ ಮುಂದುವರಿಯುವುದು ಸಾಧ್ಯವಾಯಿತು. ಬೇರಿಂಗ್ ಜಲಸಂಧಿಯಿಂದ ಪುರ್ವಾಭಿಮುಖವಾಗಿ ಪ್ರಯಾಣ ಮಾಡಿದ ಇನ್ನೊಂದು ತಂಡ ಈ ಬಿಂದುವನ್ನು ಮುಟ್ಟಿ ಬಂತು. ಇದೇ ಕಾಲಕ್ಕೆ ಅನೇಕರು ಅಮೆರಿಕನ್ ತೀರಪ್ರದೇಶದ ಪರಿಶೋಧನೆಯಲ್ಲಿ ನಿರತರಾಗಿದ್ದರು. ಸರ್ ಜಾನ್ ಫ್ರ್ಯಾಂಕ್ಲಿನ್ ಮಹಾಸಾಹಸಿ, ಟರ್ನಗೇನ್ ಸುತ್ತಮುತ್ತಣ ಪ್ರದೇಶದಲ್ಲಿ ಈತ ಪರಿಶೋಧನೆ ನಡೆಸಿದ. ಕಿಂಗ್ ವಿಲಿಯಂ ದ್ವೀಪದ ಪಶ್ಚಿಮಕ್ಕೆ ಉ. ಅ. 98º30'ನಲ್ಲಿ ಈತನ ಹಡಗುಗಳು ಮಂಜಿನಲ್ಲಿ ಸಿಕ್ಕಿಬಿದ್ದುವು. ಈತನೂ ಈತನ ಜೊತೆಯವರೂ ನಾಶ ಹೊಂದಿದರು (1847). ಇವರನ್ನು ಅನ್ವೇಷಣೆ ಮಾಡಲು ಹೋದ ತಂಡಗಳು ಅನೇಕ. ಈ ಅನ್ವೇಷಣೆಯಿಂದ ಉತ್ತರಮೇರು ಪ್ರದೇಶದ ಬಹುಭಾಗ ಶೋಧನೆಗೆ ಒಳಪಟ್ಟು ವಾಯವ್ಯ ಮಾರ್ಗದ ಕನಸು ನನಸಾಯಿತು. ಆದರೆ ವಾಣಿಜ್ಯದೃಷ್ಟಿಯಿಂದ ಈ ಮಾರ್ಗ ಈಗ ಅಷ್ಟೇನೂ ಮುಖ್ಯವಲ್ಲ. 19ನೆಯ ಶತಮಾನದ ಉತ್ತರಾರ್ಧದಲ್ಲಿ ಸ್ವಿಟ್ಸ್ಬರ್ಗನ್ ಸುತ್ತಮುತ್ತ ಸ್ವೀಡ್ ಜನರ ಚಟುವಟಿಕೆ ಅಧಿಕವಾಗಿತ್ತು. ನೂರ್ಡನ್ ಷೋಲ್ಡ್ 1878ರಲ್ಲಿ ಚಿಲ್ಯೂಸ್ಕಿನ್ ಭೂಶಿರ ಸುತ್ತಿ, ಬೇರಿಂಗ್ ಜಲಸಂಧಿಯ ಬಳಿ ಚಳಿಗಾಲ ಕಳೆದು, ಪೆಸಿಫಿಕ್ಗೆ ಪ್ರಯಾಣ ಮಾಡಿ 1879ರಲ್ಲಿ ಯೋಕೊಹಾಮ ತಲುಪಿದ. 1803-6ರಲ್ಲಿ ಅಮಂಡ್ಸೆನ್ ತನ್ನ ಹಡಗಿನಲ್ಲಿ ಪ್ರಯಾಣಮಾಡಿ ಕೆನಡಪ್ರದೇಶ ಮಾರ್ಗವಾಗಿ ಸಾಗಿ ಅಲಾಸ್ಕವನ್ನು ಬಳಸಿದಾಗ ಈ ವಾಯವ್ಯ ಮಾರ್ಗಾನ್ವೇಷಣೆ ಸಂಪೂರ್ಣವಾದಂತಾಯಿತು. ಈ ನಡುವೆ ಆತ ಮೂರು ಚಳಿಗಾಲಗಳನ್ನು ಮಾರ್ಗ ಮಧ್ಯೆ ಕಳೆಯಬೇಕಾಯಿತು. ಮುಂದೆ ಅನೇಕ ತಂಡಗಳು ಇನ್ನೂ ಶೀಘ್ರವಾಗಿ ಈ ಪ್ರಯಾಣ ಮಾಡಿ ಮುಗಿಸಿದುವು.