ಉತ್ಪಾದನಾನುಗುಣ ಕೂಲಿ
ಉತ್ಪಾದನಾನುಗುಣ ಕೂಲಿ ಎಂದರೆ ಕಾರ್ಮಿಕನ ದುಡಿಮೆಯಿಂದ ಲಭ್ಯವಾದ ಉತ್ಪನ್ನದ ಮೊತ್ತಕ್ಕೆ ಅನುಗುಣವಾಗಿ ಆತನಿಗೆ ಕೂಲಿ ನಿರ್ಧರಿಸುವ ವಿಧಾನ; ಕೂಲಿಗುತ್ತಿಗೆ (ಪೀಸ್‍ವರ್ಕ್, ಪೀಸ್ ರೇಟ್ ವೇಜ್, ಪೇಮೆಂಟ್ ಬೈ ರಿಸಲ್ಟ್ಸ್). ಹೆಚ್ಚು ಉತ್ಪಾದಿಸಿದಷ್ಟೂ ಹೆಚ್ಚು ಕೂಲಿ ದೊರಕುವುದೆಂಬ ಕಾರಣದಿಂದ ಕಾರ್ಮಿಕ ಹೆಚ್ಚು ಆಸ್ಥೆಯಿಂದ ದುಡಿಯಲು ಇದು ಸಾಮಾನ್ಯವಾಗಿ ಉತ್ತೇಜಕ.
ಹಿನ್ನೆಲೆ
ಬದಲಾಯಿಸಿಈ ವ್ಯವಸ್ಥೆಯಲ್ಲಿ ಹೆಚ್ಚು ಲಾಭ ಗಳಿಸುವುದೂ ಬಿಡುವುದೂ ಕಾರ್ಮಿಕನಿಗೇ ಸೇರಿದ್ದು. ಕೊಟ್ಟ ಕೆಲಸ ಬೇಗ ಮುಗಿಸಿದರೆ ಅಷ್ಟಕ್ಕೆ ಆತನಿಗೆ ಸಂಪೂರ್ಣ ಕೂಲಿ ಲಭಿಸುವುದಲ್ಲದೆ, ಮಿಗಿಸಿದ ಕಾಲದಲ್ಲಿ ಆತ ಇನ್ನಷ್ಟು ದುಡಿದು ಇನ್ನಷ್ಟು ಕೂಲಿಗಳಿಸಬಹುದು. ಕೆಲಸ ಮುಗಿಸಲು ಹೆಚ್ಚು ಕಾಲ ತೆಗೆದುಕೊಂಡರೆ ಆಗ ಆತನಿಗೇ ನಷ್ಟ. ಕಾಲಾನುಗುಣ ಕೂಲಿಯಷ್ಟು ಅವನಿಗೆ ದೊರಕದೆ ಹೋಗಬಹುದು ಆದ್ದರಿಂದ ಉತ್ಪಾದಕನಿಗೆ ನಷ್ಟವಿಲ್ಲ. ಕಾರ್ಮಿಕ ಶೀಘ್ರವಾಗಿ ದುಡಿದರಂತೂ ಉದ್ಯಮ ಚಾಲಕನಿಗೆ ಹೆಚ್ಚು ಲಾಭ. ಇದು ಈ ವಿಧಾನದ ಹಿಂದಿರುವ ಸರಳ ತರ್ಕ.
ಕೂಲಿಗುತ್ತಿಗೆ ಹಲವು ತೆರ. ಉತ್ಪನ್ನಕ್ಕೂ ಕೂಲಿಗೂ ನೇರ ಸಂಬಂಧ ಕಲ್ಪಿಸುವುದು[೧] ಒಂದು ವಿಧಾನ. ಇಲ್ಲಿ ಕಾರ್ಮಿಕ ತಯಾರಿಸಿದ ಪದಾರ್ಥದ ಪ್ರತಿ ಘಟಕಕ್ಕೂ ಒಂದೇ ಕೂಲಿಯ ದರ ಇದ್ದು ಆತನ ಉತ್ಪಾದನೆ ಹೆಚ್ಚಿದಂತೆ ಕೂಲಿಯೂ ಸಮಾನಾಂತರವಾಗಿ ಏರುತ್ತದೆ. ಇಲ್ಲಿ ಉತ್ಪನ್ನದ ಪ್ರತಿ ಘಟಕದ ಕೂಲಿವೆಚ್ಚ ಒಂದೇ.
ವೆಚ್ಚ
ಬದಲಾಯಿಸಿಆದರೆ ಉತ್ಪಾದನೆ ಹೆಚ್ಚಿದಂತೆ ಸ್ಥಿರ ಬಂಡವಾಳದ ಸರಾಸರಿ ವೆಚ್ಚ ಕಡಿಮೆ ಆಗುವುದರಿಂದ ಘಟಕದ (ಸರಾಸರಿ) ವೆಚ್ಚ ಕಡಿಮೆಯಾಗುತ್ತ ಹೋಗುತ್ತದೆ. ಒಟ್ಟು ಉತ್ಪಾದನ ವೆಚ್ಚ ಕಡಿಮೆಯಾಗಲು ಕಾರ್ಮಿಕನೇ ಕಾರಣನಾದ್ದರಿಂದ ಇದರ ಫಲ ಕಾರ್ಮಿಕನಿಗೇ ಸೇರತಕ್ಕದೆಂಬ ವಾದದ ಆಧಾರದ ಮೇಲೆ ಕಾರ್ಮಿಕನ ಉತ್ಪಾದನೆ ಹೆಚ್ಚಿದಂತೆ ಪ್ರತಿ ಘಟಕಕ್ಕೂ ಕೂಲಿ ದರ ಹೆಚ್ಚಿಸುವುದು ಇನ್ನೊಂದು ವಿಧಾನ.
ವಿರುದ್ಧ ಯೋಚನೆ
ಬದಲಾಯಿಸಿಇನ್ನು ಕೆಲವರು ಈ ದೃಷ್ಟಿಯನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಹೆಚ್ಚು ಬಂಡವಾಳ, ಒಳ್ಳೆಯ ಸಾಮಗ್ರಿ ಮತ್ತು ಉದ್ಯಮಿಯ ದಕ್ಷ ನಿರ್ವಹಣೆ-ಇವುಗಳೂ ಅಧಿಕೋತ್ಪಾದನೆಗೆ ಕಾರಣವೆಂಬುದು ಇವರ ವಾದ. ಉತ್ಪಾದನೆಯ ಸರಾಸರಿ ವೆಚ್ಚ ಕಡಿಮೆಯಾಗುವುದರಿಂದ ಬರುವ ಫಲವನ್ನು ಕಾರ್ಮಿಕ ಹಾಗೂ ಉದ್ಯಮಿಗಳ ನಡುವೆ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಹಂಚಬೇಕೆಂಬುದು ಇಂಥವರ ಅಭಿಪ್ರಾಯ. ಇಲ್ಲಿ ಉತ್ಪಾದನೆಯ ಏರಿಕೆಗಿಂತ ಕೂಲಿಯ ಏರಿಕೆಯ ದರ ಕಡಿಮೆ.
ಕಾರ್ಮಿಕರು ಹೆಚ್ಚು ಉತ್ಪತ್ತಿ ಮಾಡುವ ಹಾಗೆ ಉತ್ತೇಜನ ಕೊಡುವ ದೃಷ್ಟಿಯಿಂದ ಹೆಚ್ಚು ಹೆಚ್ಚು ಉತ್ಪತ್ತಿ ಮಾಡಿದಂತೆ ಹೆಚ್ಚು ಹೆಚ್ಚು ದರದಲ್ಲಿ ಕೂಲಿ ನೀಡುವ ವ್ಯವಸ್ಥೆಯೂ ಉಂಟು. ಎಲ್ಲಿ ಉತ್ಪಾದನೆ ಕಾರ್ಮಿಕನ ದುಡಿಮೆಯನ್ನೇ ಹೆಚ್ಚಾಗಿ ಅವಲಂಬಿಸಿದೆಯೋ ಅಂಥಲ್ಲಿ ಈ ವಿಧಾನ ಹೆಚ್ಚು ಉಪಯುಕ್ತ.[೨]
ಇವುಗಳಲ್ಲಿ ಯಾವ ವ್ಯವಸ್ಥೆಯೇ ಜಾರಿಯಲ್ಲಿರಲಿ, ತನ್ನ ಹತೋಟಿಗೆ ಮೀರಿದ ಕಾರಣಗಳಿಂದ ಕಾರ್ಮಿಕ ಸಾಕಷ್ಟು ಉತ್ಪಾದಿಸಲಾಗದಿದ್ದ ಪಕ್ಷದಲ್ಲಿ ಅವನಿಗೆ ಅಗತ್ಯ ಮಟ್ಟದ ಕೂಲಿ (ವೇತನ) ಕೊಡಲಾಗುತ್ತದೆ. ಇದು ಒಬ್ಬ ಸಾಮಾನ್ಯ ಕೆಲಸಗಾರ ತಯಾರಿಸಬಹುದಾದ ಉತ್ಪನ್ನಕ್ಕೆ ಕೊಡಬಹುದಾದ ವೇತನದಷ್ಟಾದರೂ ಇರಬೇಕೆಂಬುದಾಗಿ ಭಾವಿಸಲಾಗಿದೆ. ಎರಡನೆಯದಾಗಿ, ವ್ಯಕ್ತಿಗತ ಉತ್ಪನ್ನವನ್ನಳೆಯಲು ಸಾಧ್ಯವಿರುವಲ್ಲಿ ಮಾತ್ರ ಈ ವ್ಯವಸ್ಥೆಗಳನ್ನು ಆಚರಣೆಗೆ ತರಬಹುದು. ಇಂಥ ಅನುಕೂಲವಿಲ್ಲದಿದ್ದಲ್ಲಿ ಕೊನೆಯ ಪಕ್ಷ ಒಂದು ತಂಡದ ಉತ್ಪನ್ನವನ್ನಳೆಯಲು ಸಾಧ್ಯವಾದರೂ ಆ ತಂಡದ ಉತ್ಪಾದನಾನುಗುಣ ಕೂಲಿಯನ್ನು ಎಲ್ಲರಿಗೂ ಆಚರಣೆಗೆ ತರಬಹುದು. ಉತ್ಪಾದನಾನುಗುಣ ಕೂಲಿ ವ್ಯವಸ್ಥೆಯನ್ನು ಸಾಮಾನ್ಯವಾಗಿ ಉತ್ಪಾದನೆಗೆ ಸಂಬಂಧಿಸಿದ ಕಾರ್ಮಿಕರ ಪ್ರತ್ಯಕ್ಷ ಶ್ರಮಕ್ಕೆ ಅನ್ವಯಿಸುವಂತೆ ಆಚರಣೆಗೆ ತರಬಹುದೇ ಹೊರತು ಪರೋಕ್ಷ ಶ್ರಮಿಕರಾದ ಕಾವಲುಗಾರ, ಗುಮಾಸ್ತ, ಮತ್ತಿತರ ಆಡಳಿತ ವರ್ಗದವರಿಗೆ ಅನ್ವಯಿಸಲು ಸಾಧ್ಯವಿಲ್ಲ.
ಅನುಕೂಲ
ಬದಲಾಯಿಸಿಈ ವ್ಯವಸ್ಥೆಯಲ್ಲಿ ಕೆಲವು ಅನುಕೂಲಗಳಿವೆ. ಮೊದಲನೆಯದಾಗಿ, ಉತ್ಪಾದನೆ ಹೆಚ್ಚಿದಂತೆ ಕೂಲಿ ಹೆಚ್ಚುವ ಸಂಭವವಿರುವುದರಿಂದ ಈ ವ್ಯವಸ್ಥೆಯಲ್ಲಿ ಕಾರ್ಮಿಕರು ಹೆಚ್ಚು ಉತ್ಪತ್ತಿ ಮಾಡುವಂತೆ ಉತ್ತೇಜನವಿರುತ್ತದೆ. ಕಾರ್ಮಿಕರ ಉತ್ಪಾದಕತೆ ಹೆಚ್ಚುವುದರಿಂದಲೂ ಹೆಚ್ಚು ಉಸ್ತುವಾರಿಯ ಅವಶ್ಯಕತೆಯಿಲ್ಲದ್ದರಿಂದಲೂ ಉತ್ಪಾದನ ವೆಚ್ಚ ಕಡಿಮೆಯಾಗಿ ಸರಕುಗಳ ಬೆಲೆಗಳು ಕಡಿಮೆಯಾಗುವ ಸಂಭವವುಂಟು. ಅಲ್ಲದೆ, ಕಾರ್ಮಿಕರು ಕಾಲ ಕಳೆಯದೆ ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ ಹೆಚ್ಚುಗಳಿಸುವಂತೆ ಈ ವ್ಯವಸ್ಥೆ ಸಹಾಯಕ. ಇದರಲ್ಲಿ ಕೆಲವು ನ್ಯೂನತೆಗಳೂ ಉಂಟು. ಕಾರ್ಮಿಕ ಹೆಚ್ಚು ಗಳಿಸುವ ಆಸೆಯಿಂದ ಕೆಲಸದ ವೇಗವನ್ನು ತೀವ್ರಗೊಳಿಸಿ ತನ್ನ ಆರೋಗ್ಯಕ್ಕೆ ಭಂಗ ತಂದುಕೊಳ್ಳುವುದಲ್ಲದೆ ಯಂತ್ರೋಪಕರಣಗಳನ್ನೂ ಕೆಡಿಸಬಹುದು. ಕಾರ್ಮಿಕರಲ್ಲಿ ಪೈಪೋಟಿ ಹೆಚ್ಚಿ, ಸರಕುಗಳ ಗುಣಮಟ್ಟದ ಇಳಿತಕ್ಕೆ ಎಡೆಯಾದರೂ ಆಶ್ಚರ್ಯವಿಲ್ಲ. ಅಲ್ಲದೆ ಇಂಥ ವ್ಯವಸ್ಥೆಯಲ್ಲಿ ಕಾರ್ಮಿಕರ ಉದ್ಯೋಗಾವಕಾಶಗಳು ಹೆಚ್ಚದಿರಬಹುದೆಂದು ಕಾರ್ಮಿಕ ಸಂಘಗಳು ಈ ವ್ಯವಸ್ಥೆಯನ್ನು ಬಲವಾಗಿ ಖಂಡಿಸುವುದೂ ಉಂಟು.
ಆದರೂ ಈ ವ್ಯವಸ್ಥೆ (1940)ರಿಂದ ಈಚೆಗೆ ಹೆಚ್ಚು ಪ್ರಚಾರಕ್ಕೆ ಬರುತ್ತಿದೆ. ಶ್ರಮ ವಿಭಾಗದ ಫಲವಾಗಿ ಪ್ರತಿಯೊಂದು ಕೆಲಸವನ್ನೂ ಹಲವಾರು ಕ್ರಿಯೆಗಳಾಗಿ ವಿಂಗಡಿಸಿ ಒಂದೊಂದು ಕ್ರಿಯೆಯನ್ನೂ ಒಬ್ಬೊಬ್ಬ ಕಾರ್ಮಿಕನಿಗೆ ವಹಿಸುವುದರಿಂದ ಕೆಲಸ ಹೆಚ್ಚು ಸರಳವಾಗಿ ಆತನ ಉತ್ಪನ್ನವನ್ನು ಸುಲಭವಾಗಿ ಅಳೆಯಲು ಸಾಧ್ಯವಾಗಿದೆ. ಕಾಲ ಮತ್ತು ವೇಗಗಳ ಅಧ್ಯಯನಕ್ಕೆ ಈಚೆಗೆ ಹೆಚ್ಚು ಪುರಸ್ಕಾರ ದೊರೆತಿರುವುದರಿಂದ ಒಬ್ಬ ಸಾಮಾನ್ಯ ಕಾರ್ಮಿಕ ತಯಾರಿಸಬಹುದಾದ ಉತ್ಪನ್ನದ ಮೊತ್ತ ಎಷ್ಟೆಂಬುದನ್ನು ನಿಷ್ಕರ್ಷಿಸುವುದು ಸಾಧ್ಯ; ಇದರಿಂದ ಕಾರ್ಮಿಕನಿಗೆ ಕೊಡಬೇಕಾಗಬಹುದಾದ ಕನಿಷ್ಠ ವೇತನವನ್ನು ಗೊತ್ತುಪಡಿಸುವುದೂ ಸಾಧ್ಯವಾಗಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎರಡನೆಯ ಮಹಾಯುದ್ದಾನಂತರ ನಿರುದ್ಯೋಗ ಕಡಿಮೆಯಾಗುತ್ತ ಬಂದ ಕಾರಣ ಕಾರ್ಮಿಕ ಸಂಘಗಳಿಂದ ಈ ವ್ಯವಸ್ಥೆಗೆ ವಿರೋಧ ಕಡಿಮೆಯಾಗಿದೆ.
ಉತ್ಪಾದನಾನುಗುಣ ಕೂಲಿ ಈಚೆಗೆ ಹೆಚ್ಚು ಪ್ರಚಾರಕ್ಕೆ ಬಂದಿದ್ದರೂ ಇದು ಕೆಲವೇ ಉದ್ಯಮಗಳಿಗೆ ಅನ್ವಯವಾಗಿದೆ. ಏಕೆಂದರೆ ಮೊದಲೇ ಹೇಳಿದಂತೆ ಈ ವ್ಯವಸ್ಥೆಯನ್ನು ಕೇವಲ ವ್ಯಕ್ತಿಗತ ಉತ್ಪನ್ನವನ್ನಳೆಯಲು ಸಾಧ್ಯವಿರುವ ಉದ್ಯಮಗಳಲ್ಲಿ ಮಾತ್ರ ಆಚರಣೆಗೆ ತರಲು ಸಾಧ್ಯ. ಕಾರ್ಖಾನೆ, ಗಣಿ, ಮತ್ತು ಪ್ಲಾಂಟೇಷನ್ ಉದ್ಯಮಗಳಲ್ಲಿ ಮಾತ್ರ ಈ ಬಗೆಯ ಸರಳ ವಿಧಾನಗಳನ್ನನ್ವಯಿಸಬಹುದು. ವ್ಯಕ್ತಿಗತ ಉತ್ಪನ್ನವನ್ನಳೆಯಲು ಸಾಧ್ಯವಿಲ್ಲದಿರುವ ಉದ್ಯಮಗಳಾದ ವಾಣಿಜ್ಯ ಮತ್ತು ಹಂಚಿಕೆ ಉದ್ಯಮಗಳಲ್ಲಿ ಈ ವ್ಯವಸ್ಥೆ ಆಚರಣೆಯಲ್ಲಿಲ್ಲ.
ದೇಶಾವಾರು ತುಲನೆ
ಬದಲಾಯಿಸಿಪಾಶ್ಚಾತ್ಯ ದೇಶಗಳಲ್ಲಿ ಉತ್ಪಾದನಾನುಗುಣ ಕೂಲಿ ಪಡೆಯುವವರ ಸಂಖ್ಯೆ ಹೆಚ್ಚಿದೆ. ಉದಾಹರಣೆಗೆ, ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ 30%, ಇಂಗ್ಲೆಂಡಿನಲ್ಲಿ 40%, ಯೂರೋಪಿನಲ್ಲಿ 50%-60% ಮತ್ತು ಸೋವಿಯತ್ ಒಕ್ಕೂಟದಲ್ಲಿ 75% ಕಾರ್ಮಿಕರು ಉತ್ಪಾದನಾನುಗುಣವಾಗಿ ಕೂಲಿ ಪಡೆಯುತ್ತಿದ್ದಾರೆ. ಭಾರತದಲ್ಲಿ ಈ ವ್ಯವಸ್ಥೆ ಬಟ್ಟೆ ಕೈಗಾರಿಕೆಗಳಲ್ಲಿ ಮೊದಮೊದಲು ಆಚರಣೆಗೆ ಬಂತು. ಅನಂತರ ವ್ಯಕ್ತಿಗತ ಉತ್ಪನ್ನವನ್ನಳೆಯಲನುಕೂಲವಾದ ಇತರ ಉದ್ಯಮಗಳಾದ ಗಣಿ ಮತ್ತು ಪ್ಲಾಂಟೇಷನ್ ಉದ್ಯಮಗಳಲ್ಲೂ ಪ್ರಚಾರಕ್ಕೆ ಬರುತ್ತಿದೆ. ಭಾರತ ಸರ್ಕಾರದ ಲೇಬರ್ ಬ್ಯೂರೊ (1958-59)ರಲ್ಲಿ ನಡೆಸಿದ ಒಂದು ಪರಿಶೀಲನೆಯ ಪ್ರಕಾರ, ಈ ಬಗೆಯ ಕೂಲಿ ಪಡೆಯುವ ಕಾರ್ಮಿಕರ ಸಂಖ್ಯೆ ಕಾರ್ಖಾನೆ ಕೈಗಾರಿಕೆಗಳಲ್ಲಿ 31.8%, ಗಣಿ ಕೈಗಾರಿಕೆಗಳಲ್ಲಿ 57.8% ಮತ್ತು ಪ್ಲಾಂಟೇಷನ್ 75.4% ಎಂದು ತಿಳಿದುಬಂದಿದೆ. ಉತ್ಪನ್ನವನ್ನಳೆಯುವುದು ಸಾಧ್ಯವಿಲ್ಲದ ಉದ್ಯಮಗಳಲ್ಲಿ ಇಂಥವರ ಸಂಖ್ಯೆ ಬಲು ಕಡಿಮೆ. ಉದಾಹರಣೆಗೆ, ಎಂಜಿನಿಯರಿಂಗ್ ಉದ್ಯಮಗಳಲ್ಲಿ ಇವರ ಸಂಖ್ಯೆ ಕೇವಲ 1.1%.[೩]
ಯೂರೋಪ್, ಸೋವಿಯತ್ ಒಕ್ಕೂಟ ಮತ್ತು ಚೀನಗಳೊಡನೆ ಹೋಲಿಸಿದರೆ ಭಾರತದಲ್ಲಿ ಉತ್ಪಾದನಾನುಗುಣ ಕೂಲಿವ್ಯವಸ್ಥೆಗೆ ಹೆಚ್ಚು ಪುರಸ್ಕಾರ ಸಿಕ್ಕಿರುವಂತೆ ಕಂಡು ಬರುವುದಿಲ್ಲ. ಆದರೂ ಈಚೆಗೆ ಈ ವ್ಯವಸ್ಥೆ ಹೆಚ್ಚಾಗಿ ಜಾರಿಗೆ ಬರಬೇಕೆಂಬ ಭಾವನೆ ಬೆಳೆಯುತ್ತಿದೆ. ಉತ್ಪನ್ನಗಳನ್ನು ಹೆಚ್ಚಿಸುವುದೇ ಭಾರತದ ಯೋಜನೆಗಳ ಸದ್ಯದ ಗುರಿಯಾದ್ದರಿಂದ ಉತ್ಪನ್ನವನ್ನು ಹೆಚ್ಚಿಸುವಂತೆ ಉತ್ತೇಜನ ಕೊಡುವಂಥ ಈ ವ್ಯವಸ್ಥೆ ಒಳ್ಳೆಯದೆಂದು ಭಾರತ ಸರ್ಕಾರ ಒಪ್ಪಿಕೊಂಡು ಇದಕ್ಕೆ ಹೆಚ್ಚು ಪ್ರಾಮುಖ್ಯ ಕೊಟ್ಟಿದೆ. ಅಲ್ಲದೆ ಪ್ರತಿ ಕೈಗಾರಿಕೆಗೂ ನೇಮಕವಾಗುವ ವೇತನ ಮಂಡಲಿಗೆ ಸಮರ್ಪಕವಾದ ಉತ್ಪಾದನಾನುಗುಣ ಕೂಲಿ ವ್ಯವಸ್ಥೆಯೊಂದನ್ನು ರಚಿಸಿಕೊಡುವಂತೆ ಸರ್ಕಾರ ಮನವಿ ಮಾಡಿಕೊಂಡಿದೆ. ವೇತನ ಮಂಡಲಿಗಳು ಈ ವಿಷಯದಲ್ಲಿ ಅನೇಕ ಸಲಹೆಗಳನ್ನು ಆಗ್ಗಿಂದಾಗ್ಗೆ ನೀಡುತ್ತಿವೆ.
ಈ ವ್ಯವಸ್ಥೆಯನ್ನು ಯಾವುದೇ ಉದ್ಯಮದಲ್ಲಿ ಆಚರಣೆಗೆ ತರುವ ಮೊದಲು ಹಲವು ಅಂಶಗಳನ್ನು ಗಮನದಲ್ಲಿಡುವುದು ಅತ್ಯಾವಶ್ಯಕ. ಮೊದಲನೆಯದಾಗಿ, ಕಾಲ ಮತ್ತು ವೇಗದ ಅಧ್ಯಯನದ ಸಹಾಯದಿಂದ ಪ್ರತಿ ಕೆಲಸದ ವಿಷಯದಲ್ಲೂ ಸಾಮಾನ್ಯ ಕೆಲಸಗಾರ ತಯಾರಿಸಬಹುದಾದ ಉತ್ಪನ್ನವೆಷ್ಟೆಂಬುದನ್ನು ಖಚಿತಪಡಿಸಿಕೊಂಡು ಪ್ರತಿ ಕೆಲಸಕ್ಕೂ ಮೂಲಭೂತ ಕೂಲಿಯನ್ನು ನಿಗದಿಪಡಿಸಬೇಕು. ಇದರ ಜೊತೆಗೆ ಕಾರ್ಮಿಕರು ಅನವಶ್ಯ ವೇಗದಿಂದ ಕೆಲಸ ಮಾಡಿ ಯಂತ್ರೋಪಕರಣ ಮತ್ತು ಸರಕುಗಳನ್ನು ಕೆಡಿಸದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಬೇಕು. ಈ ವ್ಯವಸ್ಥೆಯನ್ನು ಆಚರಣೆಗೆ ತಂದ ಮೇಲೆ, ವೇತನ ದರವನ್ನು ಸೂಕ್ತವಾಗಿ ಬದಲಾಯಿಸದೆ ಉತ್ಪಾದನ ವಿಧಾನಗಳನ್ನು ಬದಲಾಯಿಸಕೂಡದು. ಕೊನೆಯದಾಗಿ, ಇದನ್ನು ಆಚರಣೆಗೆ ತರುವ ಮೊದಲು ಕಾರ್ಮಿಕ ಸಂಘಗಳ ಸಲಹೆ ಪಡೆಯುವುದು ಒಳ್ಳೆಯದು; ಇಲ್ಲದಿದ್ದರೆ ಕೈಗಾರಿಕಾ ಸಂಬಂಧಗಳು ಕೆಡುವ ಸಂಭವವುಂಟು. ಈ ಮುಂಜಾಗ್ರತೆ ತೆಗೆದುಕೊಳ್ಳುವುದರಿಂದ ಉತ್ಪಾದನಾನುಗುಣ ಕೂಲಿ ವ್ಯವಸ್ಥೆ ಯಶಸ್ವಿಯಾಗುವುದೆಂದು ಭಾವಿಸಲಾಗಿದೆ. [೪]
ಉಲ್ಲೇಖಗಳು
ಬದಲಾಯಿಸಿ- ↑ https://www.mbaskool.com/business-concepts/marketing-and-strategy-terms/7226-payment-by-results-pbr.html
- ↑ https://specialties.bayt.com/en/specialties/q/278605/what-is-the-payment-by-results-schemes/
- ↑ https://www.collinsdictionary.com/dictionary/english/payment-by-results
- ↑ https://www.trinityp3.com/2010/09/reasons-why-performance-based-remuneration-or-payment-by-results-often-fail/