ಉತ್ಪಾದನೆಯ ವೆಚ್ಚ
ಉತ್ಪಾದನೆಯ ವೆಚ್ಚ- ಒಂದು ಪದಾರ್ಥದ (ಕಮಾಡಿಟಿ) ನಿರ್ದಿಷ್ಟ ಪ್ರಮಾಣದ ಉತ್ಪತ್ತಿಯಲ್ಲಿ ನಿರತವಾದ ಎಲ್ಲ ಉತ್ಪಾದನಾಂಗಗಳಿಗೆ ಸಲ್ಲುವ ಹಣದ ಮೊತ್ತ (ಕಾಸ್ಟ್ ಆಫ್ ಪ್ರೊಡಕ್ಷನ್).
ಹಿನ್ನೆಲೆ
ಬದಲಾಯಿಸಿಉತ್ಪಾದನೆಯ ವೆಚ್ಚಕ್ಕೂ ಪದಾರ್ಥದ ಉತ್ಪತ್ತಿಯ ಮೊತ್ತಕ್ಕೂ ನೇರ ಸಂಬಂಧವುಂಟು. ರೇಡಿಯೋ ಉತ್ಪಾದನೆಗಾಗಿ ಇಂತಿಷ್ಟು ಹಣ ವೆಚ್ಚವಾಗುತ್ತಿದೆಯೆಂದಷ್ಟೇ ಹೇಳಿದರೆ ಆ ಮಾತಿನಲ್ಲಿ ಏನೂ ಅರ್ಥವಿಲ್ಲ. ಈ ವೆಚ್ಚದ ಅವಧಿಯನ್ನೂ ಈ ಅವಧಿಯಲ್ಲಿನ ಉತ್ಪತ್ತಿಯನ್ನೂ ಹೇಳಿದಾಗಲೇ ಅದು ಸುಸಂಬದ್ದ.
ವೆಚ್ಚ ಎಂಬ ಪದಕ್ಕೆ ನಾನಾ ಅರ್ಥಗಳುಂಟು. (ಅಸಲು ಎಂಬ ಪದವನ್ನು ಸಂದರ್ಭೋಚಿತವಾಗಿ ಪರ್ಯಾಯಪದವಾಗಿ ಬಳಸಬಹುದು.) ನಿರ್ದಿಷ್ಟ ಉತ್ಪತ್ತಿಯ ದೃಷ್ಟಿಯಲ್ಲಿ ಇದು ಒಟ್ಟು ವೆಚ್ಚ. ಉದಾ : ಕಳೆದ ತಿಂಗಳಲ್ಲಿ ತಯಾರಿಸಲಾದ ಒಂದು ನೂರು ರೇಡಿಯೋಗಳ ವೆಚ್ಚ ರೂ.೫೦,೦೦೦. ತಯಾರಿಸಲಾದ ಪದಾರ್ಥದ ಒಂದೊಂದು ಘಟಕದ ವೆಚ್ಚವನ್ನೂ ಕುರಿತು ಹೇಳಿದಾಗ ಇದು ಸರಾಸರಿ ವೆಚ್ಚ. ಉದಾ : ಒಂದು ರೇಡಿಯೋವಿನ ಬೆಲೆ ರೂ. ೫೦೦.
100 ರೇಡಿಯೋ ತಯಾರಿಸುವ ಒಂದು ಉದ್ಯಮ ಸಂಸ್ಥೆ 101ನ್ನು ತಯಾರಿಸಿದಾಗ ಒಟ್ಟು ಉತ್ಪಾದನೆಯ ವೆಚ್ಚ ಅಧಿಕವಾದರೂ 101ನೆಯ ರೇಡಿಯೋವಿನ ಉತ್ಪಾದನೆಯ ವೆಚ್ಚ ಸರಾಸರಿ ವೆಚ್ಚಕ್ಕಿಂತ ಕಡಿಮೆಯೇ ಇರಬಹುದು; ಅಥವಾ (ಉತ್ಪಾದನೆಯಲ್ಲಿ ಇಳಿಮುಖ ಪ್ರತಿಫಲ ಪ್ರವೃತ್ತಿ ಕಂಡುಬಂದಾಗ) ಹೆಚ್ಚಾಗಿಯೂ ಇರಬಹುದು; ಇಲ್ಲವೇ ಸಮನಾಗಿರಬಹುದು. ಇದು ಆ ಪದಾರ್ಥದ ಅಂಚಿನ ಘಟಕ ವೆಚ್ಚ. ಉತ್ಪಾದನೆಯ ಹೆಚ್ಚಳವಾದರೂ ಅಂಚಿನ ವೆಚ್ಚ ಅಚಲವಾಗಿ ಮುಂದುವರಿಯಲೂಬಹುದು.[೧]
ಹಣ ಮತ್ತು ವೆಚ್ಚ
ಬದಲಾಯಿಸಿಪದಾರ್ಥ ತಯಾರಿಕೆಗಾಗಿ ಉತ್ಪಾದಕ ಹಣದ ರೂಪದಲ್ಲಿ ಮಾಡಿದ ಖರ್ಚುಗಳೆಲ್ಲ ಉತ್ಪಾದನೆಯ ವೆಚ್ಚದಲ್ಲಿ ಸೇರಿರುವುದರಿಂದ ಇದನ್ನು ಉತ್ಪಾದನೆಯ ಹಣವೆಚ್ಚವೆನ್ನಬಹುದು (ಮನಿಕಾಸ್ಟ್). ಉತ್ಪಾದಕನ ದೃಷ್ಟಿಯಲ್ಲಿ ಇದೇ ಮುಖ್ಯ. ಉತ್ಪನ್ನದ ಮಾರಾಟದಿಂದ ಆತನಿಗೆ ದೀರ್ಘಕಾಲದಲ್ಲಿ ಉತ್ಪಾದನೆಯ ವೆಚ್ಚವೇ ಅಲ್ಲದೆ ಸೂಕ್ತವಾದ ಲಾಭವೂ ದೊರಕಬೇಕು. ಪದಾರ್ಥದ ಬೆಲೆಯಲ್ಲಿ ಇವೆರಡೂ ಯುಕ್ತಪ್ರಮಾಣದಲ್ಲಿ ಅಡಕವಾಗಿರುವಂತೆ ಆತ ಎಚ್ಚರಿಕೆ ನಿರ್ವಹಿಸಬೇಕು.
ಕೂಲಂಕಷವಾಗಿ ನೋಡುವುದಾದರೆ ಈ ಹಣವೆಚ್ಚದಿಂದ ನಿಜಸ್ಥಿತಿಯ ಅರಿವಾಗುವುದಿಲ್ಲ. ಪದಾರ್ಥೋತ್ಪಾದನೆಗಾಗಿ ಒಂದು ಸಂಸ್ಥೆ ಮಾಡುವ ಹಣದ ವೆಚ್ಚ ಆ ಸಂಸ್ಥೆಯ ದೃಷ್ಟಿಯಿಂದ ಮುಖ್ಯ, ನಿಜ. ಆದರೆ ಹಣವೆಂಬುದು ಮೌಲ್ಯಗಳ ಸಾಪೇಕ್ಷ ಅಳತೆಯ ಸಾಧನವಾದರೂ ಇದು ಸಂಪೂರ್ಣ ಸಮರ್ಪಕವೇನೂ ಅಲ್ಲ. ಹಣದ ಮುಸುಕನ್ನು ಕಿತ್ತು ಒಳಹೊಕ್ಕು ನೋಡಿದಾಗಲೇ ಉತ್ಪಾದನೆಯ ನಿಜವಾದ ಅಥವಾ ಯಥಾರ್ಥವಾದ ವೆಚ್ಚವೇನೆಂಬುದು ವ್ಯಕ್ತವಾಗುತ್ತದೆ.[೨]
ಯಥಾರ್ಥ ವೆಚ್ಚ
ಬದಲಾಯಿಸಿಯಥಾರ್ಥ ವೆಚ್ಚದ (ರೀಯಲ್ ಕಾಸ್ಟ್) ಬಗ್ಗೆ ಅರ್ಥಶಾಸ್ತ್ರಜ್ಞರು ನಾನಾ ಬಗೆಯ ವ್ಯಾಖ್ಯೆ ನೀಡಿದ್ದಾರೆ. ಪದಾರ್ಥೋತ್ಪಾದನೆಗಾಗಿ ಕಾರ್ಮಿಕರು ಉಪಯೋಗಿಸಿದ ಶ್ರಮ ಹಾಗೂ ತ್ಯಾಗಗಳೇ ಅದರ ಯಥಾರ್ಥವೆಚ್ಚವೆಂಬುದು ಆಡಂಸ್ಮಿತ್ತನ ಅಭಿಪ್ರಾಯ. ಮಾರ್ಷಲ್ ಇನ್ನೊಂದು ಹೆಜ್ಜೆ ಮುಂದೆ ಹೋಗುತ್ತಾನೆ. ವಿವಿಧ ಗುಣಧರ್ಮಗಳ ಎಲ್ಲ ಬಗೆಯ ಶ್ರಮಯತ್ನಗಳೂ ಆತನ ದೃಷ್ಟಿಯಲ್ಲಿ ಇದರಲ್ಲಿ ಅಡಕವಾಗಿವೆ. ಉತ್ಪಾದಿಸಿದ ಪದಾರ್ಥ ಅಂತಿಮವಾಗಿ ಸೇವೆಗೆ ದೊರಕುವವರೆಗೂ ತೋರಿಸಿದ ತಾಳ್ಮೆಯನ್ನೂ ಯಥಾರ್ಥ ವೆಚ್ಚದಲ್ಲಿ ಸೇರಿಸಬೇಕೆಂಬುದಾಗಿ ಮಾರ್ಷಲ್ ಹೇಳಿದ್ದಾನೆ. ಸ್ಥಿತಿಗತಿಗಳು ಸಂತತವಾಗಿ ವ್ಯತ್ಯಾಸ್ತವಾಗುತ್ತಿರುವ ಪ್ರಪಂಚದಲ್ಲಿ ಪದಾರ್ಥೋತ್ಪಾದನೆಯ ಹಣವೆಚ್ಚವೂ ಯಥಾರ್ಥವೆಚ್ಚವೂ ಒಂದೇ ಆಗಿರುವುದು ಸಾಧ್ಯವಿಲ್ಲ.
ಆಸ್ಟ್ರಿಯನ್ ಪಂಥದ ಅರ್ಥಶಾಸ್ತ್ರಜ್ಞರು ಯಥಾರ್ಥ ವೆಚ್ಚದ ವ್ಯಾಖ್ಯೆಗೊಂದು ಹೊಸ ಆಯಾಮವನ್ನೇ ಸೃಷ್ಟಿಸಿದ್ದಾರೆನ್ನಬಹುದು. ಸಮಾಜದಲ್ಲಿ ದೊರಕುವ ಸಾಧನಗಳು ಅಪರಿಮಿತವಲ್ಲ. ಆದ್ದರಿಂದ ಇಚ್ಚಿಸಿದ ಎಲ್ಲ ಪದಾರ್ಥಗಳನ್ನೂ ಪಡೆಯುವುದೂ ಸಾಧ್ಯವಿಲ್ಲ. ಆದ್ದರಿಂದ ಒಂದು ಪದಾರ್ಥ ಪಡೆಯುವುದಕ್ಕಾಗಿ ಇನ್ನೊಂದನ್ನು ತ್ಯಾಗಮಾಡಬೇಕಾಗಿ ಬರುತ್ತದೆ. ಅದನ್ನು ಬಿಟ್ಟು ಇದನ್ನೇ ಆಯ್ಕೆ ಮಾಡಿಕೊಂಡ ವ್ಯಕ್ತಿ ವಾಸ್ತವವಾಗಿ ಅದನ್ನು ತ್ಯಾಗಮಾಡಿದಂತೆ. ಈ ತ್ಯಾಗವೇ ಈ ಪದಾರ್ಥದ ಯಥಾರ್ಥವೆಚ್ಚ. ಇದಕ್ಕೆ ಅವರು ಅನುವು ವೆಚ್ಚವೆಂದು (ಆಪರ್ಚುನಿಟಿ ಕಾಸ್ಟ್) ಎಂದು ವಿಶಿಷ್ಟ ನಾಮಕರಣವನ್ನೇ ಮಾಡಿದ್ದಾರೆ. ಅನುವುವೆಚ್ಚದ ವಿಚಾರವಾಗಿ ಅಮೆರಿಕದ ಅರ್ಥಶಾಸ್ತ್ರಜ್ಞ ಡೆವೆನ್‍ಪೋರ್ಟ್ ವಿಶದವಾಗಿ ವ್ಯಾಖ್ಯಾನ ಮಾಡಿದ್ದಾನೆ.[೩]
(ಅನುಭೋಗಿಗಳ) ಬಯಕೆಗಳ ಪೂರೈಕೆಗಾಗಿ ಪರಸ್ಪರವಾಗಿ ಸ್ಪರ್ಧಿಸುವ ಪದಾರ್ಥಗಳ ಬೇಡಿಕೆ ಅಂತಿಮವಾಗಿ ಅವುಗಳ ಅಂಚಿನ ಉಪಯುಕ್ತತೆಗೆ ಅನುಗುಣವಾಗಿ ನಿರ್ಧಾರವಾಗುತ್ತದೆ. ದೀರ್ಘಕಾಲದಲ್ಲಿ ಪದಾರ್ಥಗಳ ಉತ್ಪಾದನೆಯ ಕಾರ್ಯ ನಡೆಯುವುದು ಈ ಬೇಡಿಕೆಯ ಅನುಗುಣವಾಗಿಯೇ. ಒಂದು ಪದಾರ್ಥವನ್ನು ಅನುಭೋಗಿಗಳು ಎಲ್ಲಿಯವರೆಗೆ ಒಂದು ಬೆಲೆಕೊಟ್ಟು ಕೊಳ್ಳಲು ಸಿದ್ದವಾಗಿರುತ್ತಾರೋ ಅಲ್ಲಿಯವರೆಗೆ ಮಾತ್ರ ಆ ಬೆಲೆಯ ಮಟ್ಟಕ್ಕೆ ಅನುಗುಣವಾದ ಉತ್ಪಾದನೆಯ ವೆಚ್ಚಮಾಡಲು ಎಂದರೆ ಉತ್ಪಾದನೆಯ ನಾನಾ ಅಂಗಗಳನ್ನು ಆಯಾ ಬೆಲೆಗಳಲ್ಲಿ ಕೊಳ್ಳಲು ಉತ್ಪಾದಕರು ಸಿದ್ಧವಾಗಿರುತ್ತಾರೆ. ಹೀಗೆ ಒಂದು ಪದಾರ್ಥ ಅನುಭೋಗಿಯ ಹಂತದಲ್ಲಿ ನಿರ್ಣಯವಾಗುವ ಅನುವುವೆಚ್ಚ ಅರ್ಥ ಮೀಮಾಂಸೆಯಲ್ಲಿ ಬಹಳ ಪ್ರಮುಖವಾದದ್ದು. ಉತ್ಪಾದನೆಯಲ್ಲಿ ನಿರತವಾದ ನಾನಾ ಅಂಗಗಳ ನಡುವೆ ಅಂತಿಮವಾಗಿ ವರಮಾನದ ವಿತರಣೆಯಾಗುವುದೂ ಇದರ ಆಧಾರದ ಮೇಲೆಯೇ. (ಇದನ್ನು ಸ್ಥಾನಾಂತರ ವೆಚ್ಚವೆಂದೂ ಕರೆಯಲಾಗಿದೆ.)
ಹೀಗೆ ತಾತ್ತ್ವಿಕವಾಗಿ ಉತ್ಪಾದನೆಯ ಅನುವು ವೆಚ್ಚದ ವಿವೇಚನೆ ಬಲು ಬೋಧಪ್ರದವಾಗಿಯೂ ಉಪಯುಕ್ತವಾಗಿಯೂ ಇರುವುದಾದರೂ ಈ ಭಾವನೆಯನ್ನು ಒಂದು ಉದ್ಯಮಸಂಸ್ಥೆಯ ಉತ್ಪಾದನೆಯ ವಾಸ್ತವಿಕ ಕ್ಷೇತ್ರದಲ್ಲಿ ಪ್ರಯೋಗಿಸಲು ಯತ್ನಿಸಿದಾಗ ಅನಿವಾರ್ಯವಾದ ನಾನಾ ಬಗೆಯ ತೊಡಕುಗಳುದ್ಭವಿಸುವುದು ಸಹಜ. ಆದ್ದರಿಂದ ಈ ಕ್ಷೇತ್ರದಲ್ಲಿ ವ್ಯವಹರಿಸುವಾಗ ಉತ್ಪಾದನೆಯ ಹಣವೆಚ್ಚವನ್ನು ಕುರಿತು ಪರಿಶೀಲನೆ ನಡೆಸುವುದೇ ರೂಢಿ. ಇದೇ ಉದ್ಯಮಿಯ ವೆಚ್ಚ.
ವೆಚ್ಚದ ಅಂಶಗಳು
ಬದಲಾಯಿಸಿಉದ್ಯಮಿಯ ದೃಷ್ಟಿಯಲ್ಲಿ ಒಂದು ಪದಾರ್ಥದ ಉತ್ಪಾದನೆಯ ವೆಚ್ಚದಲ್ಲಿ ಈ ಅಂಶಗಳಿವೆ : ೧ ಕಾರ್ಮಿಕರ ಕೂಲಿ, ೨ ಬಂಡವಾಳದ ಮೇಲೆ ಬಡ್ಡಿ, ೩ ನೆಲ ಅಥವಾ ಇತರ ಬಗೆಯ ಸ್ವತ್ತನ್ನು ಬಳಸಿದ್ದಕ್ಕೆ ಪ್ರತಿಫಲವಾಗಿ ಅದರ ಮಾಲೀಕರಿಗೆ ಕೊಟ್ಟ ಬಾಡಿಗೆ ಹಾಗೂ ಸಂಭಾವನೆ, ೪ ಅಸಿದ್ಧ ಸಾಮಗ್ರಿಯ ವೆಚ್ಚ, ೫ ಯಂತ್ರವೇ ಮುಂತಾದವುಗಳ ದುರಸ್ತಿ ಹಾಗೂ ಪ್ರತಿಸ್ಥಾಪನೆಯ ಖರ್ಚು, ೬ ಸರಕು ವಿಕ್ರಯ ಮತ್ತು ಜಾಹೀರಾತು ಖರ್ಚು, ೭ ಪದಾರ್ಥೋತ್ಪಾದನೆಯಲ್ಲಿ ತೊಡಗಲು ತಯಾರಕನಿಗೆ ಉತ್ತೇಜನ ನೀಡುವಷ್ಟು ಲಾಭ.
ಉದ್ಯಮಿಯ ವೆಚ್ಚವನ್ನು ಇನ್ನೂ ಬೇರೆ ಬಗೆಯಾಗಿ ವಿಶ್ಲೇಷಿಸುವುದು ಸಾಧ್ಯ. ಕಾಲಾವಧಿಯ ದೃಷ್ಟಿಯಿಂದ ಈ ವೆಚ್ಚಗಳನ್ನು ವಿಂಗಡಿಸುವುದು ಒಂದು ವಿಧಾನ. ಉತ್ಪಾದಕನ ಕೆಲವು ವೆಚ್ಚಗಳು ಇತರ ವೆಚ್ಚಗಳಿಗಿಂತ ಹೆಚ್ಚು ಸ್ಥಿರ. ಇವನ್ನು ಬದಲಾಯಿಸಬೇಕಾದರೆ ಹೆಚ್ಚು ಕಾಲ ಹಿಡಿಸುತ್ತದೆ. ಯಂತ್ರಸ್ಥಾವರ. ಮೇಲ್ಮಟ್ಟದ ಆಡಳಿತ ಸಿಬ್ಬಂದಿ ವೆಚ್ಚ ಮುಂತಾದವು ದೀರ್ಘಾವಧಿಯ ವೆಚ್ಚಗಳು. ಆದರೆ ಈ ಚೌಕಟ್ಟನ್ನು ಬದಲಾಯಿಸದೆ ಇದರ ವ್ಯಾಪ್ತಿಯಲ್ಲೇ ತತ್ಕಾಲದಲ್ಲಿ ಒಂದು ಮಿತಿಯವರೆಗೆ ಉತ್ಪತ್ತಿಯನ್ನು ಹೆಚ್ಚಿಸಬಹುದು. ಹೀಗೆ ಅಲ್ಪಾವಧಿಯಲ್ಲಿ ಏರಿಸಿ ತಗ್ಗಿಸಬಹುದಾದ ವೆಚ್ಚಗಳು (ಅಸಿದ್ಧ ಸಾಮಗ್ರಿ, ಕೂಲಿ ಇತ್ಯಾದಿ) ಅಲ್ಪಾವಧಿ ವೆಚ್ಚಗಳು.
ವಿಂಗಡನೆ
ಬದಲಾಯಿಸಿಇದೇ ವಿಚಾರವನ್ನೇ ಇನ್ನಷ್ಟು ಮುಂದುವರಿಸಿ ಉತ್ಪಾದಕನ ವೆಚ್ಚಗಳನ್ನು ಸ್ಥಿರ (ಫಿಕ್ಸೆಡ್) ಹಾಗೂ ವ್ಯತ್ಯಯಕಾರಿ (ವೇರಿಯಬಲ್) ಎಂದು ವಿಂಗಡಿಸುವುದು ಸಾಧ್ಯ. ಉತ್ಪತ್ತಿಯ ಗಾತ್ರಕ್ಕೆ ಅನುಗುಣವಾಗಿ ಹೆಚ್ಚುಕಡಿಮೆಯಾಗುವ ವೆಚ್ಚಗಳು ವ್ಯತ್ಯಯಕಾರಿ (ಉದಾ: ಅಸಿದ್ಧ ಸಾಮಗ್ರಿ, ಕೂಲಿ); ಬದಲಾಗದವು ಸ್ಥಿರವೆಚ್ಚ (ಉದಾ: ಯಂತ್ರಸ್ಥಾವರ, ಕಟ್ಟಡದ ಬಾಡಿಗೆ). ವ್ಯತ್ಯಯಕಾರಿ ವೆಚ್ಚ ಪದಾರ್ಥದ ಉತ್ಪತ್ತಿಗೆ ಮೂಲಭೂತವಾದದ್ದು. ಅದು ಮೂಲ ವೆಚ್ಚ. ಉತ್ಪಾದನೆಯ ಕೆಲಸ ನಡೆದರೆ ಮಾತ್ರ ಈ ಖರ್ಚು. ಸ್ಥಿರವೆಚ್ಚವನ್ನು ಮೇಲುವೆಚ್ಚವೆನ್ನಬಹುದು. ಉತ್ಪಾದನೆಯ ಕಾರ್ಯ ನಡೆಯದಿದ್ದರೂ ಖರ್ಚು ಅನಿವಾರ್ಯ. ಆದರೆ ಒಂದು ವಿಚಾರವನ್ನು ನೆನಪಿನಲ್ಲಿಟ್ಟಿರಬೇಕಾದ್ದು ಅಗತ್ಯ. ಸ್ಥಿರ ಹಾಗೂ ವ್ಯತ್ಯಯಕಾರಿ ವೆಚ್ಚವೆಂಬ ವಿಂಗಡನೆ ಸ್ವಲ್ಪ ದೂರ ಮಾತ್ರ ಸಾಧ್ಯ. ದೀರ್ಘಕಾಲದಲ್ಲಿ ಎಲ್ಲವೂ ವ್ಯತ್ಯಾಸ ಹೊಂದುತ್ತದೆಯೆಂಬುದೇ ಅಬಾಧಿತವಾದ ಸತ್ಯ.[೪]
ಉತ್ಪಾದನೆಯ ಪ್ರಕ್ರಿಯೆಯ ದೃಷ್ಟಿಯಿಂದಲೂ ಉದ್ಯಮದೊಡೆಯನ ಉತ್ಪಾದನೆಯ ವೆಚ್ಚವನ್ನು ವಿಂಗಡಿಸಬಹುದಾಗಿದೆ : 1 ಪದಾರ್ಥೋತ್ಪಾದನೆಗೆ ನೇರವಾಗಿ ಸಂಬಂಧಿಸಿದ ವೆಚ್ಚ-ಉತ್ಪಾದನ ವೆಚ್ಚ (ನೋಡಿ- ಉತ್ಪಾದನ-ವೆಚ್ಚ), 2 ಮಾರಾಟ ವೆಚ್ಚ, 3 ಇತರ ವೆಚ್ಚ.[೫]
ಉಲ್ಲೇಖಗಳು
ಬದಲಾಯಿಸಿ- ↑ https://www.investopedia.com/terms/p/production-cost.asp
- ↑ https://www.economicshelp.org/blog/glossary/costs-of-production/
- ↑ http://www.economicsdiscussion.net/production/cost-of-production/cost-of-production-economics/25485
- ↑ https://www.economicsonline.co.uk/Business_economics/Costs.html
- ↑ https://www.readyratios.com/reference/accounting/production_cost.html