ಉದಯಶಂಕರ ಭಟ್ಟ
ಉದಯಶಂಕರ ಭಟ್ಟ - ಜನನ ೧೮೦೮. ಹಿಂದೀ ಸಾಹಿತ್ಯ ಕ್ಷೇತ್ರದಲ್ಲಿ ಅದ್ವಿತೀಯ ಸ್ಥಾನ ಗಳಿಸಿದ ಕವಿ, ನಾಟಕಕಾರ. ನಾಟಕ ಸಾಹಿತ್ಯದ ಎಲ್ಲ ಕ್ಷೇತ್ರಗಳಿಗೂ ಈತನ ಕೊಡುಗೆ ಅಪಾರ. ಉಗ್ರ ಸಂಪ್ರದಾಯವಾದಿಯಾದ ತಂದೆಯಿಂದ ಸನಾತನ ಶಿಕ್ಷಣವನ್ನೂ ಸಮಕಾಲೀನ ಧೋರಣೆಯಂತೆ ಆಧುನಿಕ ಶಿಕ್ಷಣವನ್ನೂ ಪಡೆದ. ಸ್ವಾತಂತ್ರ್ಯಾಂದೋಲನದಲ್ಲಿ ಭಾಗವಹಿಸಿದಾಗ ಭಗವತೀಚರಣ ವೊಹರಾ, ಭಗತ್ಸಿಂಗ್, ಸುಖದೇವ, ಯಶಪಾಲ ಮೊದಲಾದ ಕ್ರಾಂತಿಕಾರಿಗಳಿಂದ ಪ್ರಭಾವಿತನಾಗಿ ಕ್ರಾಂತಿಕಾರಿ ಎಂಬ ನಾಟಕವನ್ನು ರಚಿಸಿದ. ದೇಶ ಬಂಧು ಚಿತ್ತರಂಜನ ದಾಸರಿಂದ ಪ್ರಭಾವಿತನಾಗಿ ಬಾಬೂ ಚಿತ್ತರಂಜನದಾಸ್ ಎಂಬ ನಾಟಕ, ರಚಿಸಿ ಅಭಿನಯಿಸಿದ. ಈತ ಬಹುಮುಖ ಪ್ರತಿಭೆಯುಳ್ಳವ. ನಾಟಕ, ಗೀತ ನಾಟಕ, ಏಕಾಂಕನಾಟಕ ಮುಂತಾದ ನಾಟಕ ಪ್ರಕಾರಗಳಲ್ಲದೆ ಕಾವ್ಯ, ಕಾದಂಬರಿ ಮುಂತಾದ ಸಾಹಿತ್ಯದ ಇತರ ಕ್ಷೇತ್ರಗಳಲ್ಲೂ ಈತನ ಪ್ರತಿಭೆ ವ್ಯಕ್ತವಾಗಿದೆ. ಈತ ಪ್ರಕಟಿಸಿದ ೧೨ ಕಾವ್ಯ ಸಂಗ್ರಹಗಳಲ್ಲಿ ತಕ್ಷಶಿಲಾ, ಮಾನಸಿ, ಯುಗದೀಪ ಮೊದಲಾದವು ಮುಖ್ಯ. ಈತನ ಕೆಲವು ಕವನಗಳಲ್ಲಿ ನವ್ಯಕಾವ್ಯದ ಹೊಳಪನ್ನೂ ಕಾಣಬಹುದು.
ನಾಟಕ
ಬದಲಾಯಿಸಿಉದಯಶಂಕರನ ವಿಶೇಷ ಪರಿಶ್ರಮ ನಾಟಕ ಸಾಹಿತ್ಯದಲ್ಲಿಯೇ, ನಾಟಕದ ಎಲ್ಲ ಪ್ರಕಾರಗಳಲ್ಲಿ ಈತನ ಕೃತಿಗಳಿವೆ. ವಾಸ್ತವವಾಗಿ ಹಿಂದಿಯಲ್ಲಿ ಗೀತ ನಾಟಕದ ಪರಂಪರೆ ಬೆಳೆಸಿದವ ಈತನೇ. ಅಶೋಕವನ ಬಂದಿನೀ, ಸಂತ ತುಲಸೀದಾಸ, ನಹುಷ ನಿಪಾತ ಮುಂತಾದವು ಖ್ಯಾತ ಗೀತ ನಾಟಕಗಳು. ಗೀತ ನಾಟಕದ ಪ್ರಭೇದವಾದ ಭಾವನಾಟಕದ ಪರಂಪರೆಯನ್ನಾರಂಭಿಸಿದ ಶ್ರೇಯಸ್ಸೂ ಈತನದೇ. ಮತ್ಸ್ಯಗಂಧಾ, ರಾಧಾ, ಕಾಲಿದಾಸ-ಇವು ಪ್ರಸಿದ್ಧ ಭಾವನಾಟಕಗಳು. ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳ ರಚನೆಯಲ್ಲೂ ಈತ ಸಿದ್ಧಹಸ್ತ. ಅಂಬಾ, ಸಗರ ಎಂಬ ಪೌರಾಣಿಕ, ವಿಕ್ರಮಾದಿತ್ಯ, ಮುಕ್ತಿಪಥ ಎಂಬ ಐತಿಹಾಸಿಕ ಮತ್ತು ಕಮಲಾ, ಪಾರ್ವತೀ ಮುಂತಾದ ಸಾಮಾಜಿಕ ನಾಟಕಗಳು ಪ್ರಸಿದ್ಧವಾಗಿವೆ. ಈತನ ಕೆಲವು ಕಾದಂಬರಿಗಳೂ ಜನಮನ್ನಣೆ ಗಳಿಸಿವೆ.
ಈತನ ಸಾಹಿತ್ಯದಲ್ಲಿ ಭಾರತದ ಪ್ರಾಚೀನ ವೈಭವ, ಸಂಸ್ಕೃತಿಗಳ ದರ್ಶನವಾಗುತ್ತದೆ. ಹಾಗೆಯೇ ಪ್ರಾಚೀನ, ಅರ್ವಾಚೀನ ವಿಚಾರಗಳ ದರ್ಶನವಾಗುತ್ತದೆ. ಪ್ರಾಚೀನ, ಅರ್ವಾಚೀನ ವಿಚಾರಗಳ ಸಂಘರ್ಷಗಳನ್ನೂ ಈತನ ಕೃತಿಗಳಲ್ಲಿ ಕಾಣಬಹುದು. ಒಟ್ಟಿನಲ್ಲಿ ಉದಯಶಂಕರ ಆಧುನಿಕ ಹಿಂದೀ ಸಾಹಿತ್ಯದ ಉತ್ತಮ ನಾಟಕಕಾರ, ಪ್ರತಿಭಾವಂತ ಕಾದಂಬರಿಕಾರ. (ಯು.ಎಸ್.ಜೆ.)
ಉಲ್ಲೇಖಗಳು
ಬದಲಾಯಿಸಿ- ↑ https://books.google.co.in/books?id=ObFCT5_taSgC&pg=PA473&lpg=PA473&dq=uday+shankar+bhatt+hindi+writer+Playwright&source=bl&ots=mWG0YwBRt4&sig=yvCdN42qFmDsvzBlGhGgydO-XSI&hl=en&sa=X&ved=0ahUKEwiJ0OvQrevPAhWBtY8KHV9WCa0Q6AEIRDAH#v=onepage&q=uday%20shankar%20bhatt%20hindi%20writer%20Playwright&f=false