ಏಕಾಭಿಮುಖ ವಿಕಾಸವಾದ
ಏಕಾಭಿಮುಖ ವಿಕಾಸವಾದ ಜೀವಿಗಳ ವಿಕಾಸಗತಿಯಲ್ಲಿ ಆಗುವ ಬೆಳೆವಣಿಗೆಗಳು ಹಂತಹಂತವಾಗಿ, ಯಾವಾಗಲೂ ಮುಮ್ಮೊಗವಾಗಿ ಖಚಿತಮಾರ್ಗದಲ್ಲೇ ಸಾಗುತ್ತವೆ ಎಂಬ ವಾದ (ಆರ್ಥೊಜೆನೆಸಿಸ್), ಇದನ್ನು ನಿರ್ಧಾರಿತ ವಿಕಾಸವೆಂದೂ ಹೇಳಲಾಗಿದೆ. ಏಕಮುಖವಿಕಾಸವಾದದ ಮೂಲ ಪ್ರವರ್ತಕರಲ್ಲೊಬ್ಬನಾದ ಥಿಯೋಡರ್ ಐಮರ್ ಚಿಟ್ಟೆಗಳ ರೆಕ್ಕೆಯಲ್ಲಿನ ದಿಂಡು ಮತ್ತು ನರರಚನೆಗಳ ವಿಕಾಸವನ್ನು ತನ್ನ ವಾದಕ್ಕೆ ಆಧಾರವಾಗಿ ಒದಗಿಸಿದ. ಅನೇಕ ಅಕಶೇರುಕ ಪಳೆಯುಳಿಕೆಗಳು ಈ ವಾದಕ್ಕೆ ಪುಷ್ಟಿ ನೀಡಿವೆ. ಎಚ್. ಎಫ್. ಆಸ್ಬಾರ್ನ್. ಡಬ್ಲ್ಯು. ಕೆ. ಗ್ರಿಗೋರಿ ಮುಂತಾದ ಜೀವವಿಜ್ಞಾನಿಗಳೂ ತಾವು ಅಭ್ಯಾಸ ಮಾಡಿದ ಕಶೇರುಕ ಜೀವ್ಯವಶೇಷ ವಿಜ್ಞಾನದಿಂದ ಇದೇ ವಾದವನ್ನು ಎತ್ತಿ ಹಿಡಿದರು. ಈ ವಾದಕ್ಕೆ ಮತ್ತೊಂದು ಪ್ರಬಲ ಉದಾಹರಣೆಯೆಂದರೆ ಅಶ್ವ ಕುಟುಂಬದ ವಿಕಾಸ.
ಹೈರಕೋಥೀರಿಯಂ ಜೀವಿ
ಬದಲಾಯಿಸಿಹೈರಕೋಥೀರಿಯಂ ಜೀವಿಯಿಂದ ನೇರವಾಗಿ ಇಂದಿನ ಅಶ್ವಕುಟುಂಬ ಹುಟ್ಟಿದೆಯೆಂದು ಅಂದಿನಿಂದ ಇಂದಿನವರೆಗೆ ಸಿಕ್ಕಿರುವ ಪಳೆಯುಳಿಕೆಗಳನ್ನು ಸಾಲಾಗಿ ಜೋಡಿಸಿ ಸಮರ್ಥಿಸುವುದುವುಂಟು. ಏಕಮುಖ ವಿಕಾಸಕ್ಕೆ ಮತಸಂಬಂಧವಾದ ನಿಗೂಢ ಕಾರಣಗಳನ್ನು ಕೊಟ್ಟವರೂ ಇದ್ದಾರೆ. ಮೊದಲೇ ನಿರ್ಧಾರವಾದ ವಿಕಾಸದ ಹಾದಿಯಲ್ಲಿ ನಡೆಯುವಂತೆ ಜೀವಿಯನ್ನು ಯಾವುದೋ ಒಂದು ಅಂತಃಶಕ್ತಿ ಪ್ರೇರೆಪಿಸುತ್ತದೆನ್ನುವವರೂ ಇದ್ದಾರೆ. ವೈಜ್ಞಾನಿಕವಾಗಿ ಜೀವದ್ರವ್ಯದಲ್ಲಿನ ನಿಜಮೌಲ್ಯಗಳು ಅದರ ವಿಕಾಸದ ಹಾದಿಯನ್ನು ರೂಪಿಸುತ್ತವೆ ಎಂಬ ಮಾತಂತೂ ನಿಜ. ವಿಕಾಸದ ಒಂದು ಭಾಗವಾದ ಆನುವಂಶಿಕ ಸರಣಿಯನ್ನು ಪ್ರತ್ಯೇಕಿಸಿ ನೋಡಿದಾಗ ಅದು ಏಕಾಭಿಮುಖವಾಗಿ ತೋರುವುದು ಸಹಜ. ಸಹಜವಷ್ಟೇ ಅಲ್ಲ, ಆನುವಂಶೀಕ ಸರಣಿ ತೋರುವ ವಿಕಾಸ ಮಾರ್ಗ ಮುಖ್ಯವಾದುದು ಹೌದು. ಈ ದೃಷ್ಟಿಯಿಂದ ಏಕಾಭಿಮುಖ ವಿಕಾಸವಾದವನ್ನು ವಿಕಾಸವಾದದ ತಳಹದಿ ಎಂದು ಒಪ್ಪಬಹುದೇ ಹೊರತು ಅದನ್ನೇ ವಿಕಾಸವಾದದ ಏಕೈಕಮಾರ್ಗ ಎನ್ನಲಾಗುವುದಿಲ್ಲ. ವಿಕಾಸ ನೇರವಾಗಿ ಅಥವಾ ಏಕಾಭಿಮುಖವಾಗಿ ನಡೆಯುವ ಕ್ರಿಯೆಯಲ್ಲ. ವಾಸ್ತವವಾಗಿ ಅದು ಬಹುಮುಖ್ಯವಾದದ್ದು. ಈ ರೀತಿಯ ಸಿದ್ಧಾಂತಕ್ಕೆ ತಳಿವಿಜ್ಞಾನದ ಕೊಡುಗೆ ಅಪಾರ. ಯಾವುದೇ ಜೀವಿಯಲ್ಲಿ ನಡೆಯುವ ಜೀನುವಿಕೃತಿಗಳು ಆ ಜೀವಿಯ ಉನ್ನತಿಗಾಗಿಯೇ ಅಥವಾ ವಿಕಾಸಕ್ಕಾಗಿಯೇ ನಡೆಯುತ್ತವೆ ಎಂಬ ಮಾತೂ ಸರಿಯಾಗಲಾರದು. ವಿಕೃತಿಗಳಿಂದಾಗಿ ಜೀವಿಗಳಲ್ಲಿ ವೈವಿಧ್ಯ ತಲೆದೋರುತ್ತದೆ. ಯಾವ ವಿಕೃತಿ ಪ್ರಕೃತಿಯ ಆಯ್ಕೆಯನ್ನು ಯಶಸ್ವಿಯಾಗಿ ಎದುರಿಸಿ ಬದುಕುತ್ತದೆಯೊ ಅದು ಉಳಿಯುತ್ತದೆ, ಮಿಕ್ಕವು ನಾಶಹೊಂದುತ್ತವೆ. ಜೀವಿಗೆ ಅನುಕೂಲವಲ್ಲದ, ಆತಂಕ ತರಬಲ್ಲ ರೂಪಭೇದಗಳು ಕೆಲವು ಸಾರಿ ಕಾಣಿಸಿಕೊಂಡು ತಲತಲಾಂತರವಾಗಿ ಬೆಳೆದು ಬರುವುದೂ ಉಂಟು. ಐರ್ಲೆಂಡಿನ ಎಲ್ಕ್ ಸಾರಂಗದ ಶೃಂಗಗಳು ಅಡ್ಡಾದಿಡ್ಡಿಯಾಗಿ ಬೆಳೆದು ಹೊರಲಾರದಷ್ಟು ಭಾರವಾಗಿವೆ. ಹೀಗಾಗಲು ಕಾರಣವನ್ನು ಹುಡುಕುವುದು ಸ್ವಲ್ಪ ಕಷ್ಟದ ಕೆಲಸವಾಗಬಹುದು. ಮೂಲದ್ರವ್ಯದ ವಿಕೃತಿ ಒಂದಕ್ಕಿಂತ ಹೆಚ್ಚಿನ ಮಾರ್ಪಾಟುಗಳಿಗೆ ಕಾರಣವಾದಾಗ ಆ ಮಾರ್ಪಾಟುಗಳಲ್ಲಿ ಕೆಲವು ಅತ್ಯಗತ್ಯವಾಗಿದ್ದು ಕೆಲವು ಅನಗತ್ಯವಾಗಿದ್ದರೂ ಅಗತ್ಯವಾದವುಗಳೊಡನೆ ಅನಗತ್ಯವಾದವನ್ನೂ ಜೀವಿ ಉಳಿಸಿಕೊಳ್ಳಬೇಕಾಗುತ್ತದೆ. ಹೈರಕೋಥೀರಿಯಂ ನೇರವಾಗಿ ಅಶ್ವಕುಟುಂಬದ ವಿಕಾಸಕ್ಕೆ ಎಡೆ ಮಾಡಿಕೊಟ್ಟಿಲ್ಲ. ಇದರ ವಿಕಾಸದ ಹಾದಿಯಲ್ಲಿ ನಾನಾ ಕವಲುಗಳಿವೆ. ಆದರೆ ಆ ಕವಲುಹಾದಿಗಳಲ್ಲಿ ವಿಕಾಸಗೊಂಡ ಜೀವಿಗಳು ಇಂದಿಲ್ಲ ಅಷ್ಟೇ. ಗಿಡ ಬೆಳೆಯುವಾಗ ನಾನಾ ರೀತಿಯ ಕವಲು ಕೊಂಬೆಗಳು ಹುಟ್ಟಿದುವು. ಆದರೆ ಅವೆಲ್ಲವೂ ಪರಿಸರವನ್ನೆದುರಿಸಲಾರದೆ ಹುಟ್ಟಿದಷ್ಟೇ ಬೇಗ ನಾಶಹೊಂದಿವೆ. ಆದ್ದರಿಂದ ಬೆಳೆದ ಗಿಡ ನೇರವಾಗಿ ಕಂಡಿತು. ಏಕಮುಖ ವಿಕಾಸವಾದಿಗಳು ಅಂಥ ಗಿಡವನ್ನೋ ಅಥವಾ ಅಂಥದೊಂದು ರೆಂಬೆಯನ್ನೋ ತಮ್ಮ ವಾದ ಸಮರ್ಥನೆಗೆ ನಿದರ್ಶನವಾಗಿ ನೀಡುತ್ತಾರೆ.ವಿಕಾಸ ಯಾವಾಗಲೂ ಮುಮ್ಮೊಗನಾದುದು ಎಂಬ ವಾದವೂ ಸರಿಯಲ್ಲ. ಅದು ಹಿಮ್ಮೊಗನಾಗಿರುವುದನ್ನು ಪರಿಶೋಧನೆಗಳಿಂದ ಸಮರ್ಥಿಸಲಾಗಿದೆ (ನೋಡಿ-ವಿಕಾಸವಾದ).[೧]
ಸಂಸ್ಕೃತಿಯ ವಿಕಾಸ
ಬದಲಾಯಿಸಿಸಂಸ್ಕೃತಿಯ ವಿಕಾಸವನ್ನು ಕುರಿತ ವಿವೇಚನೆಯಲ್ಲೂ ಏಕಾಭಿಮುಖ ವಿಕಾಸವಾದದ ಪ್ರಭಾವ ಬಿದ್ದಿದೆಯೆಂಬುದು ಗಮನಾರ್ಹ. ಸಂಸ್ಕೃತಿಯ ಬೆಳೆವಣಿಗೆಯಲ್ಲಿ ಮನಸ್ಸಿನ ಪಾತ್ರ ಪ್ರಧಾನವೆಂಬುದು 18ನೆಯ ಶತಮಾನದ ಭಾವನೆಯಾಗಿತ್ತು. 19ನೆಯ ಶತಮಾನದ ವೈಜ್ಞಾನಿಕ ಭಾವನೆಗಳ ಪ್ರಸಾರದೊಂದಿಗೆ ಸಂಸ್ಕೃತಿ ವಿಕಾಸದ ಕಾರ್ಯ-ಕಾರಣ ಸಂಬಂಧವನ್ನು ಕುರಿತ ಅಧ್ಯಯನವೂ ಆರಂಭವಾಯಿತು. ಜೀವವಿಕಾಸದಲ್ಲಿ ಒಂದು ಕ್ರಮವಿರುವ ಹಾಗೆ ಸಂಸ್ಕೃತಿ ವಿಕಾಸದಲ್ಲೂ ಒಂದು ಕ್ರಮವನ್ನು ಕಾಣಬಹುದೆ-ಎಂಬ ಪ್ರಶ್ನೆಗೆ ಉತ್ತರದ ಅನ್ವೇಷಣೆಯಲ್ಲಿ ತೊಡಗಿದ್ದವರಿಗೆ ಏಕಾಭಿಮುಖ ವಿಕಾಸವಾದ ಅನುವಾಗಿ ಒದಗಿಬಂತೆನ್ನಬಹುದು. ಸಮಾಜವಿಕಾಸ ಪ್ರಜ್ಞಾಪುರ್ವಕವಾದದ್ದಲ್ಲವಾ ದರೂ ಅದು ಅನಿವಾರ್ಯವೆಂಬುದಂತೂ ನಿಜ. ಈ ಸಂತತಿ ನವೀಕರಣ ಕ್ರಿಯೆಯ ವಿಧಾನವನ್ನರಿಯುವುದು ಆಶಕ್ಯ. ಇದರಲ್ಲಿ ಒಂದು ಕ್ರಮವಿಲ್ಲವಾದರೂ ಈ ವಿಕಾಸ ಏಕಾಭಿಮುಖ. ಇದು ಸದಾ ಮುಮ್ಮೊಗನಾದದ್ದು-ಎಂಬುದು ಆಗಿನ ಮಾನವಕುಲ ವಿಜ್ಞಾನಿಗಳ ಮತವಾಗಿತ್ತು.[೨]
ಜೀವವಿಕಾಸ ಕ್ಷೇತ್ರ
ಬದಲಾಯಿಸಿಸಾಮೂಹಿಕ ಸಮಾಜವಾದದ ಪ್ರತಿಪಾದಕರಾದ ಮಾಕ್ರ್ಸ್-ಎಂಗೆಲ್ಲರು ಈ ವಾದದ ಪ್ರತಿಪಾದನೆಯಲ್ಲಿ ಮಾನವಕುಲವಿಜ್ಞಾನಿಗಳಿಗಿಂತಲೂ ಮುಂದೆ ಹೋದರು. ಇವರು ಕಂಡ ಸಾಮಾಜಿಕ ಪ್ರಗತಿಯ ದರ್ಶನ ಇನ್ನೂ ನಿಚ್ಚಳವಾದದ್ದು, ಖಚಿತವಾದದ್ದು. ಇಡೀ ಸಮಾಜವೇ ಸಾಮೂಹಿಕ ಸಾಮ್ಯವಾದದ ಗುರಿಯತ್ತ ಅನಿವಾರ್ಯವಾಗಿ ಮುಂದುವರಿಯುತ್ತದೆ; ಸಮಾಜದ ಆಂತರಿಕ ಪ್ರವೃತ್ತಿಗಳು ಈ ಬದಲಾವಣೆಗೆ ಪ್ರೇರಕವಾಗಿರುತ್ತವೆ-ಎಂದು ಇವರು ತರ್ಕಿಸಿದರು.ಮುಂದೆ ಜೀವವಿಕಾಸ ಕ್ಷೇತ್ರದಲ್ಲಿ ಏಕಾಭಿಮುಖವಿಕಾಸವಾದದ ಬಗ್ಗೆ ಅನೇಕ ಪ್ರಶ್ನೆಗಳೂ ಸಂಶಯಗಳೂ ಉದ್ಭವಿಸಿದಾಗ ಸಂಸ್ಕೃತಿವಿಕಾಸಕ್ಕೆ ಸಂಬಂಧಿಸಿದಂತೆಯೂ ಈ ವಾದದಲ್ಲಿ ಅನೇಕ ತೊಡಕುಗಳು ಹುಟ್ಟಿಕೊಂಡುವು. ಸಮಾಜವಿಜ್ಞಾನಿಗಳು ಸಮಾಜವಿಕಾಸಕ್ಕಿಂತ ಹೆಚ್ಚಾಗಿ ಅದರ ಸಂಘಟನೆಯ ಬಗ್ಗೆ ಹೆಚ್ಚು ವಿಚಾರ ಹರಿಸಲಾರಂಭಿಸಿದರು.
ಉಲ್ಲೇಖಗಳು
ಬದಲಾಯಿಸಿ- ↑ http://marathi.bharatavani.in/dictionary-surf/?did=25&letter=&start=1760&language=English[ಶಾಶ್ವತವಾಗಿ ಮಡಿದ ಕೊಂಡಿ]
- ↑ http://bharatavani.in/dictionary-surf/?did=25&letter=%E0%B2%8F&start=60&language=English[ಶಾಶ್ವತವಾಗಿ ಮಡಿದ ಕೊಂಡಿ]