ಒನಕೆವಾಡು
ಜನಪದರು ಬಳಸುವ ಭತ್ತ ಕುಟ್ಟುವಾಗ ಒನಕೆ ಹಿಡಿದು ಹಾಡುವ ಹಾಡುಗಳೇ ಒನಕೆವಾಡು. ಈ ಒನಕೆವಾಡು ಪದದ ಉಲ್ಲೇಖ ಋಗ್ವೇದದಲ್ಲಿ ಇದೆ. ಜಾನಪದ ಸಾಹಿತ್ಯದ ವಿಶಿಷ್ಟತೆಯಲ್ಲಿ ಇದು ಒಂದು.ಒನಕೆವಾಡು ತ್ರಿಪದಿ ರೂಪದ ಪದ್ಯಗಳಿಂದ ಕೂಡಿದ್ದು ಶೃಂಗಾರ ವಿಚಾರಗಳನ್ನು ಒಳಗೊಂಡಿರುತ್ತದೆ.
ಇದು ಬಹಳ ಜನಪ್ರಿಯವೂ ಪ್ರಚುರವೂ ಆದ ಜಾನಪದ ಸಾಹಿತ್ಯದ ಒಂದು ಪ್ರಕಾರವಾಗಿದ್ದಂತೆ ತೋರುತ್ತದೆ. ಮನೆಮಾತಾದ ಯಾವುದೇ ವಿಷಯವನ್ನು ಕುರಿತು ಹೇಳುವಾಗ ಒನಕೆವಾಡಿನಂತೆ ಎಂದು ಹಿಂದೆ ಹೇಳುತ್ತಿದ್ದರೆಂದು ಊಹಿಸಬಹುದು. ಸಮಸ್ತಾವನಿಯ ಜನಂ ಒನಕೆವಾಡಪ್ಪಿನೆಗಂ ಸಲೆನುಡಿದ ನುಡಿ ಯಥಾರ್ಥಂ ನಿನ್ನೊಳ್-ಎಂಬ ದುರ್ಗಸಿಂಹನ (1031) ಪಂಚತಂತ್ರದ ಉಕ್ತಿ ಇದಕ್ಕೆ ಆಧಾರ.
8ನೆಯ ಶತಮಾನದ ಗಂಗದೊರೆ ಸೈಗೊಟ್ಟ ಶಿವಮಾರನ ಗಜಾಷ್ಟಕ ತನ್ನ ಸುಭಗಕವಿತಾಗುಣದಿಂದ ಓವನಿಗೆಯೂ ಒನಕೆವಾಡೂ ಆಯಿತೆಂದು 11ನೆಯ ಶತಮಾನದ ಶಾಸನವೊಂದರಲ್ಲಿ ಹೇಳಿದೆ. ಗಜಾಷ್ಟಕ ಸಿಕ್ಕಿಲ್ಲವಾದ್ದರಿಂದ ಅದರ ಸ್ವರೂಪ ತಿಳಿಯದು. ಆದರೆ ಒನಕೆವಾಡು ಸಾಮಾನ್ಯವಾಗಿ ತ್ರಿಪದಿಯ ರೂಪದಲ್ಲಿರುತ್ತಿತ್ತೆಂದು ಅನುಮಾನಿಸಲು ಅವಕಾಶವಿದೆ. ಏಕೆಂದರೆ ನೇಮಿಚಂದ್ರ (ಸು.1170) ಲೀಲಾವತಿ ಕಾವ್ಯದಲ್ಲಿ ವೇಶ್ಯಾಸ್ತ್ರೀಯರು ಸೂಳೆ ಸಿದ್ಧಾಂತವನ್ನು ಒನಕೆವಾಡಾಗಿ ಮಾಡಿ ಹಾಡುತ್ತಿದ್ದರೆಂದು ಹೇಳಿ, ಆ ಸಂದರ್ಭದಲ್ಲಿ ಕೆಲವುತ್ರಿಪದಿಗಳನ್ನು ಕೊಟ್ಟಿದ್ದಾನೆ. ಅಲ್ಲದೆ, ಧಾನ್ಯವನ್ನು ಒರಳಲ್ಲಿ ಹಾಕಿ ಕುಟ್ಟುವಾಗಲೂ (ಕಂಡನ) ಶೃಂಗಾರ ವಿಪ್ರಲಂಭಗಳನ್ನು ವರ್ಣಿಸುವಾಗಲೂ ಹಾಡಬೇಕು ಎಂದು ಸೋಮೇಶ್ವರನ (1130) ಮಾನಸೋಲ್ಲಾಸದಲ್ಲಿ ಹೇಳಲಾಗಿದೆ. ಒನಕೆವಾಡಿಗೂ ತ್ರಿಪದಿಗೂಸಂಬಂಧವಿತ್ತೆಂಬುದಕ್ಕೆ ಸುರಂಗಕವಿ, ಸೋಮರಾಜ ಮುಂತಾದ ಕವಿಗಳಲ್ಲೂ ಸಮರ್ಥನೆ ಸಿಕ್ಕುತ್ತದೆ. ಸಿರಿಯಾಳನ ಕಥೆಯನ್ನು ಸ್ತ್ರೀಯರು ಒನಕೆವಾಡಿನ ರೂಪದಲ್ಲಿ ಹಾಡುತ್ತಿದ್ದರೆಂದು ಭೀಮಕವಿಯ ಹೇಳಿಕೆ.
ಒಟ್ಟಿನಲ್ಲಿ ಒನಕೆವಾಡೆಂಬುದು ತ್ರಿಪದಿಯ ಛಂದಸ್ಸಿನಲ್ಲಿದ್ದ ಹಾಡೆಂದೂ ಯಾವುದೇ ವಿಷಯ ಅಥವಾ ಕಥೆ ಒನಕೆವಾಡಾಗಿ ಪರಿಣಮಿಸುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿತ್ತೆಂದೂ ನಿರ್ಧರಿಸಬಹುದು