ಒರಿಸ್ಸಾದ ಪ್ರಾಗಿತಿಹಾಸ

ಒರಿಸ್ಸದ ಪ್ರಾಗಿತಿಹಾಸ: ಮಹಾನದಿ, ಬ್ರಾಹ್ಮಣಿ ಮತ್ತು ವೈತರಣಿ ನದಿಗಳ ಮುಖಜಭೂಮಿಗಳ ಅತ್ಯಂತ ಫಲವತ್ತಾದ ಪ್ರದೇಶವನ್ನೊಳಗೊಂಡಿರುವ ಒರಿಸ್ಸ ರಾಜ್ಯದಲ್ಲಿ ಇತಿಹಾಸಪುರ್ವ ಕಾಲದಲ್ಲೂ ಜನ ವಾಸವಾಗಿದ್ದರೆಂಬುದಕ್ಕೆ ಅನೇಕ ಆಧಾರಗಳು ದೊರೆತಿವೆ.

ರಾಜ್ಯದ ಅನೇಕ ಪ್ರದೇಶಗಳಲ್ಲಿ ಪುರ್ವಶಿಲಾಯಗದ ಅವಶೇಷಗಳು ಕಂಡುಬಂದಿವೆ. ಭೂಶಾಸ್ತ್ರರೀತ್ಯ ಬಹಳ ಪುರಾತನವೆಂದು ಹೇಳಲಾದ ಇಲ್ಲಿಯ ಶಿಲಾಮಟ್ಟಗಳಲ್ಲಿ ಪುರ್ವಶಿಲಾಯುಗಕ್ಕೆ ಸೇರುವ ಉಂಡೆಕಲ್ಲುಗಳಿಂದ ಮಾಡಿದ ಚಕ್ಕೆಕಲ್ಲಿನ ಆಯುಧಗಳು ಒರಟಾದ ಅಬ್ಬೆವಿಲ್ಲಿಯನ್ ಹಂತದ ಮತ್ತು ಸುಧಾರಿತ ಅಷ್ಯೂಲಿಯನ್ ಹಂತದ ಕೈಗೊಡಲಿಗಳು ದೊರಕಿವೆ. ಆದರೆ ಈ ಎಲ್ಲ ರೀತಿಯ ಆಯುಧಗಳ ತಯಾರಿಕೆಯಲ್ಲಿ ಯಾವುದೇ ರೀತಿಯ ಕ್ರಮಾಗತ ಸುಧಾರಣೆಗಳನ್ನೂ ಕಾಣುವಂತಿಲ್ಲ. ಆಕಾರ, ತಯಾರಿಕೆಯ, ವಿಧಾನಗಳಿಂದ ಆಯುಧಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಗುಂಪಿನಲ್ಲಿ ಕೈಗೊಡಲಿಗಳು ಹೆಚ್ಚಿದ್ದು ಒರಟಾಗಿ ಮಾಡಲ್ಪಟ್ಟಿವೆ. ಎರಡನೆಯ ಗುಂಪಿನ ಆಯುಧಗಳು ಸುಧಾರಿತ ರೀತಿಯವಾಗಿದ್ದು ತೆಳ್ಳಗೂ ಚಪ್ಪಟೆಯಾಗಿಯೂ ಇರುವುದರಿಂದ ಅಷ್ಯೂಲಿಯನ್ ಹಂತಕ್ಕೆ ಸೇರುತ್ತವೆ. ಮೂರನೆಯ ಗುಂಪಿನ ಅಯುಧಗಳು ಕುಶಲತೆಯಿಂದ ಮಾಡಲ್ಪಟ್ಟ ಸುಂದರ ವಸ್ತುಗಳಾಗಿವೆ. ಕೆಲವು ಉಂಡೆಕಲ್ಲಿನ ಆಯುಧಗಳು ದೊರೆತಿದ್ದರೂ ಅವನ್ನು ಪಂಜಾಬಿನ ಸೋಹನ್ ಸಂಸ್ಕೃತಿಗೆ ಸೇರಿಸಲಾಗುವುದಿಲ್ಲ. ಪುರ್ವಶಿಲಾಯುಗದ ಕೊನೆಗಾಲದಲ್ಲಿ ಕೈಗೊಡಲಿಗಳು ಸಣ್ಣವಾಗುವುವಲ್ಲದೆ ಚಕ್ಕೆ ಕಲ್ಲಿನ ಆಯುಧಗಳು ಪ್ರಬಲವಾಗಿ ಮಧ್ಯಶಿಲಾಯುಗದ ಆರಂಭವನ್ನು ಸೂಚಿಸುತ್ತವೆ. ಪುರ್ವಶಿಲಾಯುಗದ ಅವಶೇಷಗಳು ಧೇನ್ಕಾನಾಲ್, ಸುಂದರ್ ಘರ್, ಸಂಬಲ್ಪುರ, ಕಿಯೋಂಝಾರ್ ಮತ್ತು ಮಯೂರ್ಭಂಜ್ಗಳಲ್ಲಿ ಹೆಚ್ಚಿಗೆ ದೊರೆಯುತ್ತವೆ.

ಮಧ್ಯಶಿಲಾಯುಗ ಕಾಲದಲ್ಲಿ ಒರಿಸ್ಸದ ಬಹುಭಾಗಗಳಲ್ಲಿ ಶಿಲಾಯುಗ ಮಾನವ ವಾಸಿಸುತ್ತಿದ್ದನೆಂಬುದಕ್ಕೆ ಸಾಕಷ್ಟು ಮಾಹಿತಿಗಳು ದೊರೆತಿವೆ. ಹೆಚ್ಚು ಸಂಖ್ಯೆಯ ಚಕ್ಕೆಕಲ್ಲಿನ ಆಯುಧಗಳೂ ಕೆಲಮಟ್ಟಿಗೆ ಆಯುಧಗಳಿಗೆ ಬಳಸುತ್ತಿದ್ದ ಉಂಡೆಕಲ್ಲುಗಳೂ ಮಯೂರ್ಭಂಜ್, ಕಿಯೋಂಝಾರ್, ಸುಂದರ್ಘರ್ ಮತ್ತು ಧೇನ್ಕಾನಾಲ್ ಪ್ರದೇಶಗಳಲ್ಲಿ ನದೀಮಟ್ಟ ಮತ್ತು ನದೀಪಾತ್ರಗಳಲ್ಲೂ ದೊರೆಯುತ್ತವೆ. ಆಯುಧಗಳಲ್ಲಿ ಶೇ. 71ರಷ್ಟು ಒರೆಯುವ ಆಯುಧಗಳೂ 21ರಷ್ಟು ಮೊನೆಗಳೂ ಉಳಿದವು ಕೊರೆಯುವ ಮತ್ತಿತರ ಆಯುಧಗಳೂ ಆಗಿವೆ. ಸಾಧಾರಣವಾಗಿ ಚಕ್ಕೆಕಲ್ಲುಗಳೇ ಹೆಚ್ಚಾಗಿರುವ ಆಯುಧಗಳಲ್ಲಿ ಕ್ಲಾಕ್ಟೋನಿಯನ್ ರೀತಿಯ ಚಕ್ಕೆಗಳು ಹೆಚ್ಚಾಗಿದ್ದು, ಲೆವಾಲ್ವಾಷಿಯನ್ ಪದ್ಧತಿ ಹೆಚ್ಚು ಬಳಕೆಗೆ ಬಂದಂತೆ ಕಾಣುವುದಿಲ್ಲ. ಆಯುಧಗಳ ಅಂಚುಗಳಿಂದ ಪುಟ್ಟ ಚಕ್ಕೆಗಳನ್ನು ತೆಗೆದು ಅವನ್ನು ಪರಿಣಾಮಕಾರಿಯಾಗಿ ಮಾಡುತ್ತಿದ್ದರು.

ಅಂತ್ಯ ಅಥವಾ ಸೂಕ್ಷ್ಮಶಿಲಾಯುಧಕಾಲದಲ್ಲಿ ಈ ಪ್ರದೇಶದಲ್ಲಿ ಮಾನವನ ಚಟುವಟಿಕೆ ಸೀಮಿತವಾಗಿದ್ದಂತೆ ಕಾಣುತ್ತದೆ. ಮಯೂರ್ಭಂಜ್, ಕಿಯೋಂಝಾರ್ ಮತ್ತು ಸುಂದರಘರ್ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಮಾತ್ರ ಸೂಕ್ಷ್ಮಶಿಲಾಯುಧಗಳನ್ನು ಸಂಗ್ರಹಿಸಲಾಗಿದೆ. ಇವು ಸಾಧಾರಣವಾಗಿ ನದೀದಂಡೆಗಳಲ್ಲೂ ಬೆಟ್ಟಗುಡ್ಡಗಳ ತಪ್ಪಲು ಅಥವಾ ಮೈದಾನ ಪ್ರದೇಶಗಳಲ್ಲೂ ದೊರೆತಿವೆ. ಈವರೆವಿಗೂ ಈ ನೆಲಗಳನ್ನು ವಿಧ್ಯುಕ್ತವಾಗಿ ಸಂಶೋಧಿಸದಿರುವುದರಿಂದ ಒರಿಸ್ಸದಲ್ಲಿನ ಸೂಕ್ಮಶಿಲಾಯುಧ ಸಂಸ್ಕೃತಿಯ ವಿಷಯವಾಗಿ ಹೆಚ್ಚೇನೂ ಹೇಳಬರುವುದಿಲ್ಲ. ಇತ್ತೀಚೆಗೆ ಕೇಂದ್ರ ಪ್ರಾಕ್ತನಶಾಸ್ತ್ರ ಇಲಾಖೆಯವರು ಮಯೂರ್ಭಂಜ್ ಜಿಲ್ಲೆಯ ಬಾರಿಪದಾ ಬಳಿ ನಡೆಸಿದ ಪ್ರಾಯೋಗಿಕ ಸಂಶೋಧನೆಗಳಲ್ಲಿ ನವಶಿಲಾಯುಗದ ಅವಶೇಷಗಳನ್ನುಳ್ಳ ಪದರಗಳ ಕೆಳಭಾಗದಲ್ಲಿ ಈ ಸಂಸ್ಕೃತಿಗಳ ಅವಶೇಷಗಳು ದೊರೆತಿರುವುದರಿಂದಲೂ ಮತ್ತು ಆ ಕಾಲದಲ್ಲಿ ಮಡಕೆಗಳ ಉಪಯೋಗ ಗೊತ್ತಿಲ್ಲದಿದ್ದು, ಸೂಕ್ಷ್ಮಶಿಲಾಯುಧಗಳು ಬಹಳ ಪುರಾತನ ರೀತಿಯವುಗಳಾಗಿದ್ದುದರಿಂದಲೂ ಸಾಕಷ್ಟು ಹಿಂದಿನ ಕಾಲದಲ್ಲೇ ಇಲ್ಲಿ ಈ ಸಂಸ್ಕೃತಿ ರೂಢಿಯಲ್ಲಿತ್ತೆಂದು ಹೇಳಬಹುದಾಗಿದೆ.

ಒರಿಸ್ಸದ, ಏಕೆ ಇಡೀ ಭಾರತದ, ಪ್ರಾಕ್ತನಶಾಸ್ತ್ರದಲ್ಲಿ ಬಗೆಹರಿಸಲಾಗದೇ ಉಳಿದಿರುವ ಒಂದು ಸಮಸ್ಯೆಯೆಂದರೆ ಗಂಗಾನದಿಯ ಬಯಲು, ಮಧ್ಯಪ್ರದೇಶ ಮತ್ತು ಒರಿಸ್ಸ ಪ್ರದೇಶಗಳಲ್ಲಿ ಆಕಸ್ಮಿಕವಾಗಿ ದೊರೆತಿರುವ ತಾಮ್ರದ ಉಪಕರಣಗಳ ಸಂಗ್ರಹಣೆಗಳದು. ಒರಿಸ್ಸದ ಗುಂಜೆರಿಯಾ, ದ್ರುನಿಯಾ, ಝಷ್ಪುರ್, ಬಾಣಸುರಿಯ, ಬಸ್ಸಿಯಾ, ತಾಮಜೂರಿ, ಸಿತಾಭಂಜಿ, ದಶ್ಪಲ್ಲಾ-ಮುಂತಾದೆಡೆಗಳಲ್ಲಲ್ಲದೆ ಬಿಹಾರ ಮತ್ತು ಮಧ್ಯಪ್ರದೇಶದ ಹಲವೆಡೆಗಳಲ್ಲೂ ಈ ರೀತಿಯ ಸಂಗ್ರಹಣೆಗಳು ಕಂಡುಬಂದಿವೆ. ಚಪ್ಪಟೆಯಾದ ಉಳಿ, ಭುಜಗಳುಳ್ಳ ಉಳಿ, ಉದ್ದನಾದ ಉಳಿ, ಪರಶು, ಇಬ್ಬದಿಯಲ್ಲೂ ಚೂಪಾಗಿರುವ ಕೊಡಲಿ, ಈಟಿಗಾಳ, ಮೋಟು ಕತ್ತಿ, ಗುರಾಣಿಯ ಮೊನೆ, ದೊಡ್ಡ ಉಂಗುರ, ಮಾನವಾಕಾರದ ಉಪಕರಣಗಳು-ಮುಂತಾದವು ಈ ಸಂಗ್ರಹಣೆಗಳಲ್ಲಿರುತ್ತಿದ್ದು ಭಾರತ ಅಥವಾ ಪ್ರಪಂಚದ ಮತ್ತಾವ ಭಾಗದಲ್ಲೂ ಇವನ್ನು ಹೋಲುವ ಆಯುಧೋಪಕರಣಗಳು ಈವರೆಗೆ ಕಂಡುಬಂದಿಲ್ಲ, ಮೇಲಿನ ಉಪಕರಣಗಳಲ್ಲಿ ಕೆಲವು ಇತರ ಪ್ರಾಕ್ತನಸಂಸ್ಕೃತಿಯ ಅವಶೇಷಗಳೊಡನೆ ದೊರೆತಿವೆ. ನವ್ಡತೋಲಿ (ಮಧ್ಯ ಪ್ರದೇಶ), ಚಾರಿದೋಲಿ (ಮಹಾರಾಷ್ಟ್ರ) ಮತ್ತು ಖುರ್ಡಿ (ರಾಜಸ್ತಾನ) ಮುಂತಾದೆಡೆಗಳಲ್ಲಿ ಚಪ್ಪಟೆಯಾದ ಉಳಿ ದೊರೆತಿವೆ, ಭುಜಗಳುಳ್ಳ ಕಲ್ಲಿನ ಉಳಿ ಪುರ್ವ ಭಾರತದ ನವಶಿಲಾಯುಗ ಸಂಸ್ಕೃತಿಗಳಲ್ಲಿ ವಿಶೇಷವಾಗಿ ಬಳಕೆಯಲ್ಲಿತ್ತು. ಮೋಟುಕತ್ತಿಗಳು ಪಶ್ಚಿಮ ಏಷ್ಯ ಮತ್ತು ಆಫ್ಘಾನಿಸ್ತಾನ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದುವು. ಆದರೆ ಈ ಸಂಗ್ರಹಣೆಯಲ್ಲಿರುವ ಎಲ್ಲ ರೀತಿಯ ಆಯಧಗಳು ಎಲ್ಲೂ ಒಟ್ಟಿಗೆ ದೊರೆತಿಲ್ಲ. ದುರದೃಷ್ಟವಶಾತ್ ಆ ಉಪಕರಣಗಳು ಯಾವ ಸಂಸ್ಕೃತಿಗೆ ಸೇರಿದುವೆಂದು ನಿರ್ದೇಶಿಸಲು ಬೇಕಾದ ಪ್ರಾಕ್ತನ ಆಧಾರಗಳು ಈವರೆಗೂ ಕಂಡುಬಂದಿಲ್ಲ. ಈ ಸಂಗ್ರಹಣೆಗಳು ದೊರೆತ ಎರಡು ನೆಲೆಗಳು-ಬಿಸೌಲಿ ಮತ್ತು ರಾಜ್ಪುರ್ ಪಾರ್ಸು. ಇಲ್ಲಿ ನಡೆದ ಭೂಶೋಧನೆಗಳಲ್ಲಿ ಈ ಉಪಕರಣಗಳೊಂದಿಗೆ ಯಾವ ಸಂಬಂಧವಿಲ್ಲದಿದ್ದರೂ ತೆಳಗಿನ ಪದರಗಳಲ್ಲಿ ದೊರೆತಿರುವ ಕೆಮ್ಮಣ್ಣು ಲೇಪಿತವಾಗಿರುವ ಮಡಕೆ ಚೂರುಗಳು ಹಸ್ತಿನಾಪುರ ನೆಲೆಯಲ್ಲಿ ಬೂದುಬಣ್ಣದ ವರ್ಣಲೇಪಿತ ಮಡಕೆಗಳು ದೊರೆತಿರುವುದಕ್ಕಿಂತಲೂ ಹಳೆಯ ಪದರಗಳಲ್ಲಿ ದೊರೆತಿರುವುದರಿಂದಲೂ ಬೂದುಬಣ್ಣದ ವರ್ಣಲೇಪಿತ ಮಡಕೆಗಳಿಗೆ ಸಂಬಂಧಿಸಿದ ಸಂಸ್ಕೃತಿ ಪ್ರ್ರ.ಶ.ಪು. 2ನೆಯ ಸಹಸ್ರಮಾನದ ಉತ್ತರಾರ್ಧಕ್ಕೆ ನಿರ್ದೇಶಿತವಾಗಿರುವುದರಿಂದಲೂ ಈ ತಾಮ್ರದ ಉಪಕರಣಗಳನ್ನು ಪ್ರ.ಶ.ಪು.2ನೆಯ ಸಹಸ್ರಮಾನದ ಪುರ್ವಾರ್ಧಕ್ಕೆ ತಾತ್ಕಾಲಿಕವಾಗಿ ನಿರ್ದೇಶಿಸಲಾಗಿದೆ. ಬಹುಶಃ ಹgಪ್ಪ ಸಂಸ್ಕೃತಿ ಆಳಿದ ಅನಂತರ ಸಿಂಧೂ ಬಂiÀÄಲಿನಿಂದ ಪಲಾಯನ ಗೈಯುತ್ತಿದ್ದವರೋ ಭಾರತಕ್ಕೆ ವಲಸೆಬಂದ ಆರ್ಯಜನರ ಮೊದಲ ಪಂಗಡದವರೋ ಈ ಉಪಕರಣಗಳ ಕರ್ತೃಗಳಾಗಿರಬೇಕೆಂದು ಊಹಿಸಲಾಗಿದೆ.

ಒರಿಸ್ಸದಲ್ಲಿ ನವಶಿಲಾಯುಗ ಸಂಸ್ಕೃತಿಯ ಅವಶೇಷಗಳು ವಿಪುಲವಾಗಿ ದೊರೆತಿರುವದೇನೋ ನಿಜ. ಆದರೆ ಇತ್ತೀಚಿನ ವರೆಗೂ ಈ ಅವಶೇಷಗಳನ್ನು ಭೂಮಿಯ ಮೇಲ್ಭಾಗದಿಂದ ಮಾತ್ರ ಸಂಗ್ರಹಿಸಿರುವುದರಿಂದ ಅವುಗಳ ಸಾಂಸ್ಕೃತಿಕ ಹಂತ ಮತ್ತು ಐತಿಹಾಸಿಕ ಮಹತ್ತ್ವಗಳೇನೆಂಬುದನ್ನು ನಿರ್ಧರಿಸಲಾಗಿಲ್ಲ. ಈ ಅವಶೇಷಗಳು ಸಾಧಾರಣವಾಗಿ ಪುರ್ವಭಾರತ ನವಶಿಲಾಯುಗದ ಅವಶೇಷಗಳನ್ನೇ ಹೋಲುವುದರಿಂದ ಈ ಸಂಸ್ಕೃತಿಯನ್ನು ಆ ಗುಂಪಿಗೆ ಸೇರಿಸಲಾಗಿದೆ. ಇತ್ತೀಚೆಗೆ ಮಯೂರ್ಭಂಜ್ ಜಿಲ್ಲೆಯಲ್ಲೂ ಸಂಜಯ್ ಮತ್ತು ಬರ್ಹಾಬಲಂಗ ನದೀಬಯಲುಗಳಲ್ಲೂ ಹೆಚ್ಚು ಸಂಖ್ಯೆಯಲ್ಲಿ ಈ ಆಯುಧಗಳನ್ನು ಸಂಗ್ರಹಿಸಿರುವುದಲ್ಲದೆ ಗಂಜಾಮ್ ಜಿಲ್ಲೆಯ ಜೌಗಡ ಎಂಬಲ್ಲಿ ನಡೆದ ಭೂಶೋಧನೆಗಳಲ್ಲಿ ಪ್ರ.ಶ.ಪು. 300 ವರ್ಷಗಳ ಸುಮಾರಿನಲ್ಲಿ ರೂಢಿಯಲ್ಲಿದ್ದ ಕಬ್ಬಿಣಯುಗದ ಸಂಸ್ಕೃತಿ ಪದರಗಳಿಗಿಂತಲೂ ಹಳೆಯ ಪದರಗಳಲ್ಲಿ ಈ ಆಯಧಗಳು ದೊರೆತಿವೆ. ಕೇಂದ್ರ ಪ್ರಾಕ್ತನ ಶಾಸ್ತ್ರ ಇಲಾಖೆಯವರು ಮಯೂರ್ಭಂಜ್ ಜಿಲ್ಲೆಯ ಬಾರಿಪದಾ ಬಳಿ ನಡೆಸಿದ ಭೂಶೋಧನೆಗಳಲ್ಲಿ ಪುರಾತನವಾದ ಸೂಕ್ಷ್ಮಶಿಲಾಯುಗದ ಸಂಸ್ಕೃತಿಯ ಅವಶೇಷಗಳು ದೊರೆತ ಪದರಗಳ ಅನಂತರದ ಮಟ್ಟದಲ್ಲಿ ನಯಗೊಳಿಸಿದ ಕಲ್ಲಿನ ಆಯುಧಗಳೂ ಒರಟಾದ ಮಡಕೆ ಚೂರುಗಳೂ ಚಕ್ಕೆಕಲ್ಲಿನ ಆಯುಧಗಳೂ ದೊರೆತು ಒರಿಸ್ಸದ ನವಶಿಲಾಯುಗದ ಸಂಸ್ಕೃತಿಗೆ ಸಾಕಷ್ಟು ಪುರಾತನತೆಯನ್ನು ದೊರಕಿಸಿಕೊಟ್ಟಿವೆ.

ಅನಂತರ ಕಬ್ಬಿಣಯುಗಕ್ಕೆ ಸೇರಿದ ಐತಿಹಾಸಿಕ ಆರಂಭಯುಗದ ಸಂಸ್ಕೃತಿಯ ಕುರುಹುಗಳು ಈ ಪ್ರಾಂತ್ಯದ ಹಲವಾರೆಡೆಗಳಲ್ಲಿ ದೊರೆತಿವೆ. ಭೂಶೋಧನೆ ನಡೆದಿರುವ ಎರಡು ನೆಲೆಗಳ ಮಾಹಿತಿಗಳನ್ನು ಇಲ್ಲಿ ಪರಿಶೀಲಿಸಬಹುದು. ನೆರೆಯ ಗಂಗಾನದೀ ಬಂiÀÄಲಿನಲ್ಲಿ ಈ ವೇಳೆಗಾಗಲೇ ಚಾರಿತ್ರಿಕ ನಗರೀಕರಣ ರೂಢಿಗೆ ಬಂದಿದ್ದು ಸುವ್ಯವಸ್ಥಿತ ರಾಜ್ಯಾಡಳಿತ ಪದ್ಧತಿ ಜಾರಿಯಲ್ಲಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು. ಭುವನೇಶ್ವರದ ಬಳಿಯಿರುವ ಶಿಶುಪಾಲಘರ್ ನೆಲೆಯಲ್ಲಿ ನಡೆದ ಭೂಶೋಧನೆಗಳಿಂದ ತಿಳಿದುಬಂದಿರುವಂತೆ ಇಲ್ಲಿ ಒಂದು ಬಲವಾದ ಮಣ್ಣಿನ ಕೋಟೆಯನ್ನು ಚಚ್ಚೌಕ ತಳಹದಿಯ ಮೇಲೆ ಕಟ್ಟಲಾಗಿತ್ತು. ಅದರ ಇಬ್ಬದಿಯ ಗೋಡೆಗಳೂ ಮುಕ್ಕಾಲು ಮೈಲಿ ಉದ್ದವಾಗಿದ್ದು ಅಲ್ಲಿ ನಯಮಾಡಿದ ಚಚ್ಚೌಕವಾದ ಕಲ್ಲಿನ ಕಂಬಗಳಿಂದ ಕೂಡಿದ್ದ ಮುನ್ಚಾಚಿದ ಎರಡು ಮಹಾದ್ವಾರಗಳಿದ್ದುವು. ಸುವ್ಯವಸ್ಥಿತ ಮತ್ತು ಸುಭದ್ರವಾಗಿರುವ ಈ ಕೋಟೆ ಪ್ರಭಾವಶಾಲಿ ಕೇಂದ್ರೀಕೃತ ಆಡಳಿತವಿದ್ದುದನ್ನು ಸೂಚಿಸುತ್ತದೆ. ಸುಮಾರು ಇದೇ ಕಾಲಕ್ಕೆ ನಿರ್ದೇಶಿಸಬಹುದಾದ ದಕ್ಷಿಣ ಒರಿಸ್ಸದ ಗಂಜಾಮ್ ಜಿಲ್ಲೆಯಲ್ಲಿ ಋಷಿಕುಲ್ಯ ನದೀದಂಡೆಯಲ್ಲಿರುವ ಜೌಗಡದಲ್ಲಿ 25 ಅಡಿಗಳೆತ್ತರದ ಮಣ್ಣಿನ ಕೋಟೆ ಮತ್ತು ಮುಂದುವರಿದ ಜನಜೀವನವನ್ನು ರೂಪಿಸುವ ಕಬ್ಬಿಣಯುಗದ ಸಂಸ್ಕೃತಿಯ ಅವಶೇಷಗಳು ಭೂಶೋಧನೆಗಳಲ್ಲಿ ಕಂಡುಬಂದಿವೆ. ಈ ನೆಲೆಯ ಬಳಿಯಲ್ಲಿ ಅಶೋಕ ಚಕ್ರವರ್ತಿಯ ಹದಿನಾಲ್ಕು ಶಿಲಾಶಾಸನಗಳ ಪ್ರತಿಗಳೂ ಇರುವುದರಿಂದ ಈ ವೇಳೆಗಾಗಲೇ ಐತಿಹಾಸಿಕ ಯುಗದ ಉದಯವಾಗಿತ್ತೆನ್ನಬಹುದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಇವನ್ನೂ ನೋಡಿ

ಬದಲಾಯಿಸಿ