ಕನ್ನಡ ಛಂದಸ್ಸು
ಕನ್ನಡ ಛಂದಸ್ಸು : ಕನ್ನಡ ಭಾಷೆಯ ಪದ್ಯಸಾಹಿತ್ಯದಲ್ಲಿ ಬಹಳ ಹಿಂದಿನಿಂದಲೂ ವಾಡಿಕೆಯಾಗಿ ಬಳಕೆಯಾಗುತ್ತ ಬಂದಿರುವ ಸಂಸ್ಕೃತ ಮತ್ತು ಪ್ರಾಕೃತ ಪ್ರಭಾವದ ಪದ್ಯಜಾತಿಗಳನ್ನೂ ವಿಶೇಷವಾಗಿ ಅಚ್ಚಕನ್ನಡ ಮಟ್ಟುಗಳೆನಿಸಿದ ತ್ರಿಪದಿ ಷಟ್ಪದಿ ಮೊದಲಾದ ಪದ್ಯಜಾತಿಗಳು ಮತ್ತು ಹೊಸಗನ್ನಡ ಕವಿತೆಯ ಮಟ್ಟುಗಳನ್ನೂ ಕನ್ನಡ ಛಂದಸ್ಸು ಎಂಬ ಮಾತು ಒಳಗೊಳ್ಳುತ್ತದೆ.ಕನ್ನಡ ಕಾವ್ಯಕ್ಕೆ ಛಂದಸ್ಸಿನ ಅವಶ್ಯಕತೆ ಬಹಳಷ್ಟಿದೆ
ಕನ್ನಡ ಛಂದಸ್ಸನ್ನು ಕುರಿತ ಗ್ರಂಥಗಳು
ಬದಲಾಯಿಸಿಕಾವ್ಯಲಕ್ಷಣ ಗ್ರಂಥವಾದ ಕವಿರಾಜಮಾರ್ಗದಲ್ಲಿಯೇ (ಪ್ರ.ಶ.ಸು. 850) ಕನ್ನಡ ಛಂದಸ್ಸಿಗೆ ಸಂಬಂಧಿಸಿದ ವಿಷಯಗಳಾದ ಯತಿ, ಛಂದೋಭಂಗ, ಗುರುಲಘುದೋಷಗಳು, ಪ್ರಾಸ-ಇವುಗಳ ಪ್ರಸ್ತಾಪವಿದೆ. ಕನ್ನಡ ಕವಿಗಳು ಮುಖ್ಯವಾಗಿ ಸಂಸ್ಕೃತ ಛಂದಸ್ಸಿನಲ್ಲಿ ಸ್ವಾತಂತ್ರ್ಯವಹಿಸಿ ಮಾಡಿಕೊಂಡ ಮಾರ್ಪಾಡುಗಳು, ಅವುಗಳಿಂದಾದ ಪರಿಣಾಮಗಳು-ಇವುಗಳ ಸ್ವರೂಪ ಸ್ಪಲ್ಪಮಟ್ಟಿಗೆ ಆ ವಿಷಯಗಳಿಂದ ತಿಳಿಯುತ್ತದೆ. ತಮಿಳು ಭಾಷೆಯ ಯಾಪ್ಪರುಂಗಲಕ್ಕಾರಿಹೈ ಎಂಬ ಪ್ರಾಚೀನ ಛಂದೋಗ್ರಂಥದ ವ್ಯಾಖ್ಯಾನದಲ್ಲಿ ಗುಣಗಾಂಕಿಯಂ ಎಂಬ ಕನ್ನಡ ಛಂದೋಗ್ರಂಥದ ಉಲ್ಲೇಖವಿದೆ. ಇದು ಈವರೆಗೆ ದೊರೆತಿಲ್ಲ. ಅಲ್ಲದೆ ಈ ಗ್ರಂಥದ ಅಸ್ತಿತ್ವ, ಕರ್ತೃತ್ವ, ಕಾಲ ಎಲ್ಲವೂ ತೀರ ಅನಿಶ್ಚಿತವೂ ವಿವಾದಾಸ್ಪದವೂ ಆಗಿವೆ. ಮೂರನೆಯ ವಿಜಯಾದಿತ್ಯನೆಂಬ ಪುರ್ವಚಾಳುಕ್ಯ ರಾಜನಿಗೆ ಅಂಕಿತ ಮಾಡಿರಬಹುದಾದ, ಸು, 9ನೆಯ ಶತಮಾನದ ಕೃತಿಯಿದು ಎಂಬುದಾಗಿ ಊಹಿಸಲಾಗಿದೆ. 1ನೆಯ ನಾಗವರ್ಮನ (ಪ್ರ.ಶ.ಸು. 990) ಛಂದೋಂಬುಧಿ ಉಪಲಬ್ಧವಾದ ಕನ್ನಡ ಛಂದೋಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದುದು; ಪ್ರಮಾಣಭೂತವೂ ಪ್ರಸಿದ್ಧವೂ ಆದುದು. ಇದರಲ್ಲಿ ಕನ್ನಡ ಛಂದಸ್ಸಿಗೆ ಸಂಬಂಧಿಸಿದ ನಾನಾ ವಿಷಯಗಳು ಸ್ವತಂತ್ರವಾಗಿಯೂ ತಕ್ಕಮಟ್ಟಿಗೆ ವಿಸ್ತಾರವಾಗಿಯೂ ಪ್ರತಿಪಾದಿತವಾಗಿವೆ. ಈ ಗ್ರಂಥದಲ್ಲಿ ಆರು ಅಧಿಕಾರಿಗಳಿದ್ದು, ಅವುಗಳಲ್ಲಿ ಸಂಸ್ಕೃತ, ಪ್ರಾಕೃತ ಮತ್ತು ಕನ್ನಡ ಛಂದಸ್ಸುಗಳಲ್ಲಿ ಕನ್ನಡ ಕಾವ್ಯಾಭ್ಯಾಸಿಗಳು ತಿಳಿಯಬೇಕಾಗಿರುವ ಅತ್ಯಗತ್ಯವಾದ ಎಲ್ಲ ಅಂಶಗಳೂ ಸಂಗ್ರಹಿತವಾಗಿವೆ. ಐದನೆಯ ಅಧಿಕಾರ ಅಚ್ಚ ಕನ್ನಡ ಛಂದಸ್ಸಿಗೆ ಮೀಸಲಾಗಿದ್ದು, ಅದು ಆ ವಿಷಯದ ವಿವೇಚನೆಗೆ ಬಹು ಉಪಯುಕ್ತವಾದ ಮೂಲಭೂತವಾದ ಸಾಮಗ್ರಿಯನ್ನೊದಗಿಸುತ್ತದೆ.
ಪ್ರಸಿದ್ಧ ಶಾಸ್ತ್ರಜ್ಞನಾದ ಇಮ್ಮಡಿ ನಾಗವರ್ಮ (ಸು. 1145) ಛಂದೋವಿಚಿತಿ ಎಂಬೊಂದು ಗ್ರಂಥವನ್ನು ಅಥವಾ ಛಂದಶ್ಶಾಸ್ತ್ರವನ್ನು ಕುರಿತ ಗ್ರಂಥವೊಂದನ್ನು ಬರೆದಿದ್ದಂತೆ ಕಾವ್ಯಾವಲೋಕದಲ್ಲಿ ದೊರೆಯುವ ಒಂದು ಆಧಾರದಿಂದ ತಿಳಿಯುತ್ತದೆ. ಇದು ಈವರೆಗೆ ದೊರೆತಿಲ್ಲ. ಈಶ್ವರ ಕವಿಯ (ಪ್ರ.ಶ. ಸು. 1500) ಕವಿಜಿಹ್ವಾಬಂಧನಂ ಒಂದು ರೀತಿಯ ಸಮ್ಮಿಶ್ರ ಗ್ರಂಥವಾದರೂ ಮುಖ್ಯವಾಗಿ ಛಂದಶ್ಶಾಸ್ತ್ರವನ್ನು ಕುರಿತದ್ದು. ಈ ಗ್ರಂಥದ ಮೊದಲ ಮೂರು ಆಶ್ವಾಸಗಳಲ್ಲಿ ಪ್ರಧಾನವಾಗಿ ಛಂದಶ್ಶಾಸ್ತ್ರದ ಸಂಜ್ಞಾಪ್ರಕರಣಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ಮಾತ್ರ ಬಂದಿವೆ. ಅಲ್ಲಲ್ಲಿ ತೆಲುಗು ಛಂದೋಗ್ರಂಥಗಳ ಪ್ರತಿಪಾದನ ರೀತಿಯನ್ನೂ ವಿಷಯಗಳನ್ನೂ ಒಳಗೊಂಡಿರುವುದು ಈ ಕೃತಿಯ ವೈಶಿಷ್ಟ್ಯ. ಛಂದೋಂಬುಧಿಯ ತರುವಾಯದಲ್ಲಿ ತಕ್ಕಮಟ್ಟಿಗೆ ಗಣ್ಯವಾದ ಛಂದೋಗ್ರಂಥವೆಂದರೆ ಗುಣಚಂದ್ರನೆಂಬ ಜೈನಕವಿಯ (ಪ್ರ.ಶ. ಸು. 1650) ಛಂದಸ್ಸಾರ. ಇದರಲ್ಲಿ ಐದು ಆಧಿಕಾರಗಳಿದ್ದು, ಸಂಸ್ಕೃತ ಛಂದಸ್ಸಿನ ವಿಷಯಕ್ಕೆ ಪ್ರಮುಖವೆನಿಸಿದೆ. ಮಾತ್ರಾಷಟ್ಪದಿಗಳು, ತಾಳಗಳು, ರಗಳೆಯ ಪ್ರಭೇದಗಳು ಈ ಮುಂತಾದವನ್ನು ಪ್ರಾಯಶಃ ಇಲ್ಲಿ ಮೊದಲ ಬಾರಿಗೆ ಪ್ರಸ್ತಾಪ ಮಾಡಿರುವುದು ಗಮನಾರ್ಹವಾಗಿದೆ. ಆದರೆ ಅಂಶವೃತ್ತಗಳ ವಿಚಾರವೇ ಇಲ್ಲದಿರುವುದು ಆಶ್ಚರ್ಯಕರವಾಗಿದೆ. ಶಾಲ್ಯದ ಕೃಷ್ಣರಾಜನ (ಪ್ರ.ಶ. 1748) ಷಟ್ಪ್ರತ್ಯಯವೆಂಬುದು ಪ್ರಸ್ತಾರ ಮೊದಲಾದ ಆರು ಪ್ರತ್ಯಯಗಳನ್ನು ವಿವರಿಸುವ ಛಂದೋಗ್ರಂಥ. ಕೇದಾರಭಟ್ಟನ ವೃತ್ತಿರತ್ನಾಕರದ ಅಜ್ಞಾತ ಕರ್ತೃಕವಾದ ಕನ್ನಡ ವೃತ್ತಿಯೊಂದು ಸು. ಇದೇ ಕಾಲಕ್ಕೆ (ಸು. 1775) ರಚಿತವಾದಂತೆ ತೋರುತ್ತದೆ. ಇವಕ್ಕೆ ಈಚಿನದಾದ ನಂದಿ ಛಂದಸ್ಸು (ಸು. 19ನೆಯ ಶ.) ಕರ್ತೃ ನಿಶ್ಚಿತವಾಗಿ ತಿಳಿಯದ, ಈಗ ವರ್ಣವೃತ್ತಗಳ ಭಾಗವಷ್ಟೇ ಉಳಿದಿರುವ ಒಂದು ಅಸಮಗ್ರ ಛಂದೋಗ್ರಂಥ.
ಕನ್ನಡ ಛಂದಸ್ಸಿನ ಗಣಸ್ವರೂಪವನ್ನು ಪ್ರಸಿದ್ಧವಾದ ಪದ್ಯಜಾತಿಗಳನ್ನೂ ಕೆಲವು ಸಂಸ್ಕೃತ ಲಕ್ಷಣ ಗ್ರಂಥಗಳಲ್ಲಿ ಕೂಡ ಪ್ರಾಸಂಗಿಕವಾಗಿ ವಿವೇಚಿಸಿರುವುದು ಕಂಡುಬರುತ್ತದೆ. ಜಯಕೀರ್ತಿಯ (ಸು. 1050) ಛಂದೋನುಶಾಸನಮ್ ಎಂಬ ಗ್ರಂಥದಲ್ಲಿ ಅಲ್ಲಲ್ಲಿ ಕನ್ನಡ ಛಂದಸ್ಸಿನ ಸಂಗತಿಗಳು ಕ್ವಚಿತ್ತಾಗಿ ಉಕ್ತವಾಗಿರುವುದಲ್ಲದೆ, ಕರ್ಣಾಟಕ ವಿಷಯಭಾಷಾಜಾತ್ಯಧಿಕಾರವೆಂಬ 6ನೆಯ ಅಧಿಕಾರದಲ್ಲಿ ಪುರ್ತಿಯಾಗಿ ಕನ್ನಡ ಛಂದಸ್ಸಿನ ವಿವೇಚನೆ ಲಕ್ಷಣ-ಲಕ್ಷ್ಯ ಸಮನ್ವಿತವಾಗಿ ಬಂದಿದೆ. ಈ ಗ್ರಂಥದಲ್ಲಿ ನಾಗವರ್ಮನ ಛಂದೋಂಬುಧಿಯ ಪ್ರಭಾವವನ್ನು ಕಾಣಬಹುದಾಗಿದೆ. 3ನೆಯ ಸೋಮೇಶ್ವರನ ಮಾನಸೋಲ್ಲಾಸದಲ್ಲಿ (ಪ್ರ.ಶ. 1129), ಅದರ ಚತುರ್ವಿಂಶತಿಯ 16ನೆಯ ಅಧ್ಯಾಯದಲ್ಲಿ, ಕನ್ನಡ ಛಂದಸ್ಸಿಗೆ ಸಂಬಂಧಪಟ್ಟಂತೆ, ಅಂಶಗಣಗಳ ಸ್ವರೂಪವನ್ನೂ ತ್ರಿಪದಿ ಷಟ್ಪದಿ ಹಾಗೂ ಕಂದಪದ್ಯ ಇವುಗಳ ಸ್ವರೂಪವನ್ನೂ ಲಕ್ಷಣ-ಲಕ್ಷ್ಯಗಳೊಂದಿಗೆ ವಿವರಿಸಿದೆ. ಶಾಙರ್ಗ್‌ದೇವನ ಸಂಗೀತರತ್ನಾಕರವೆಂಬ ಗ್ರಂಥದಲ್ಲಿ, ಅದರ 4ನೆಯ ಪ್ರಬಂಧಾಧ್ಯಾಯದಲ್ಲಿ, ಕನ್ನಡ ಛಂದಸ್ಸಿನ ಏಳೆ, ತ್ರಿಪದಿ ಮತ್ತು ಷಟ್ಪದಿಗಳ ಲಕ್ಷಣವನ್ನು ನಿರೂಪಿಸಿದೆ. ಕನ್ನಡ ಭಾಷಾಸಾಹಿತ್ಯಗಳ ಪರಿಚಯವಿದ್ದಂತೆ ತೋರುವ ಈ ಲಾಕ್ಷಣಿಕರ ವಿವರಣೆಗಳಿಂದ ಕನ್ನಡ ಛಂದಸ್ಸಿನ ಸ್ವರೂಪ ಜ್ಞಾನಕ್ಕೆ ತುಂಬ ಉಪಕಾರವಾಗಿದೆ.
ಕನ್ನಡ ಛಂದಸ್ಸಿನ ವಿವಿಧ ಗಣಸ್ವರೂಪ
ಬದಲಾಯಿಸಿಕನ್ನಡದಲ್ಲಿ ಪ್ರಚಲಿತವಾಗಿರುವ ಪದ್ಯಜಾತಿಗಳು ಮೂರು ವಿಧ : ವರ್ಣವೃತ್ರಗಳು, ಮಾತ್ರಾವೃತ್ತಗಳು ಮತ್ತು ಅಂಶವೃತ್ತಗಳು. ವರ್ಣವೃತ್ತಗಳಲ್ಲಿ, ಪ್ರತಿಪಾದದಲ್ಲಿಯೂ ನಿರ್ದಿಷ್ಟವಾದ ಅಕ್ಷರ ಸಂಖ್ಯೆಯಿದ್ದು ಲಘುವೋ ಗುರುವೋ ಆಗಿರುವ ಅಯಕ್ಷರಗಳ ವಿನ್ಯಾಸವೂ ನಿರ್ದಿಷ್ಟವಾಗಿರುತ್ತದೆ. ಮಯರಸತಜಭನ ಎಂಬುದಾಗಿ ಸಂಜ್ಞೆಗಳನ್ನು ಮಾಡಿಕೊಂಡು, ಪದ್ಯಪಾದವನ್ನು 3-3 ಅಕ್ಷರಗಳ ಗಣಗಳನ್ನಾಗಿ ವಿಭಜಿಸಿ ವೃತ್ತಗಳ ಲಕ್ಷಣವನ್ನು ತಿಳಿಯಲಾಗುತ್ತದೆ. ಮಾತ್ರಾವೃತ್ತಗಳಲ್ಲಿ, ಪ್ರತಿಪಾದದಲ್ಲಿಯೂ ಇಷ್ಟಿಷ್ಟು ಮಾತ್ರೆಗಳ ಇಷ್ಟಿಷ್ಟು ಗಣಗಳೆಂದಿದ್ದು, ಮಾತ್ರಾಸಂಖ್ಯೆಗೆ ಅನುಗುಣವಾಗಿ ಕೆಲವು ಸಂದರ್ಭಗಳಲ್ಲಿ ಕೆಲವು ವಿಶಿಷ್ಟ ಗಣನಿಯಮಗಳನ್ನನುಸರಿಸಿ, ಗಣಭಾಗವಿರುತ್ತದೆ. ಅಂಶವೃತ್ತಗಳಲ್ಲಿ, ಪ್ರತಿಪಾದದಲ್ಲಿಯೂ ವಾಚನದ ಅಥವಾ ಗಾಯನದ ಗತಿಯನ್ನನುಸರಿಸಿ, ತಾಳಲಯಗಳು ಸರಿಯಾಗಿ ಹೊಂದಿಕೊಳ್ಳಲು ಲಘುಗುರುಗಳ ಮಾತ್ರಾಪರಿಮಾಣವೂ ಹಿಗ್ಗಿ ಅಥವಾ ಕುಗ್ಗಿ ಹೊಂದಿಕೆಗೆ ಅನುವಾಗುವ ಅಕ್ಷರ (ಅಂಶ)ಗಳಿಂದ ಕಟ್ಟಿದ ಗಣಗಳು ಬಂದಿರುತ್ತವೆ; ಎಂದರೆ ಹಾಗೆ ಅಕ್ಷರಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಕ್ರಮವಾಗಿ 2, 3 ಮತ್ತು 4 ಅಂಶಗಳ ಗಣಗಳಿಗೆ ಬ್ರಹ್ಮ, ವಿಷ್ಣು ಮತ್ತು ರುದ್ರ ಎಂಬ ಸಂಕೇತಗಳನ್ನು ಕನ್ನಡದಲ್ಲಿ ಕೊಟ್ಟಿದೆ. ಅಚ್ಚಕನ್ನಡ ಮಟ್ಟುಗಳು ಅಂಶವೃತ್ತಗಳು.
ಸಂಸ್ಕೃತ ಛಂದಸ್ಸಿನ ಮೂಲದ ವರ್ಣವೃತ್ತಗಳು : ಪ್ರಾಚೀನ ಕನ್ನಡ ಸಾಹಿತ್ಯದ ಕಾವ್ಯಗಳೂ ಪುರಾಣಗಳೂ ವಿಶೇಷವಾಗಿ ಚಂಪು ಪದ್ಧತಿಯಲ್ಲಿ ರಚಿತವಾಗಿವೆ, ಚಂಪು ಪದ್ಧತಿಯ ಚೌಕಟ್ಟು ಮುಖ್ಯವಾಗಿ ಗದ್ಯ ಹಾಗೂ ಕಂದ, ವೃತ್ತಗಳಿಂದಾದುದು.
ವೃತ್ತಗಳು, ವರ್ಣವೃತ್ತಗಳು
ಬದಲಾಯಿಸಿಸಮ, ಅರ್ಧಸಮ ಮತ್ತು ವಿಷಮ-ಎಂಬ ಅವುಗಳ ಮೂರು ಪ್ರಕಾರಗಳಲ್ಲಿ ಮೊದಲನೆಯದೇ ವಿಶೇಷವಾಗಿ ಬಳಕೆಯಾಗಿರತಕ್ಕದ್ದು, ಉಳಿದವು ತೀರ ಕ್ವಚಿತ್ತಾಗಿ ಬಂದಿರತಕ್ಕವು. ವರ್ಣವೃತ್ತಗಳಲ್ಲಿ ಕೆಲವನ್ನು ಸಂಸ್ಕೃತ ಛಂದಸ್ಸಿನಿಂದ ಕನ್ನಡಕ್ಕೆ ನೇರವಾಗಿ ತೆಗೆದುಕೊಂಡಿದೆ. ಉದಾಹರಣೆಗೆ ಶಾರ್ದೂಲವಿಕ್ರೀಡಿತ, ಸ್ರಗ್ಧರೆ ಇತ್ಯಾದಿ; ಇನ್ನು ಕೆಲವನ್ನು ಆ ಮಾದರಿಗಳಲ್ಲಿ ಹೊಸದಾಗಿ ರಚಿಸಿಕೊಂಡಿದೆ. ಉದಾ. ಮತ್ತೇಭವಿಕ್ರೀಡಿತ, ಮಹಾಸ್ರಗ್ಧರೆ ಇತ್ಯಾದಿ. ಜೊತೆಗೆ ಕೆಲವು ವ್ಯತ್ಯಾಸಗಳನ್ನೂ ಕನ್ನಡ ಕವಿಗಳು ಮಾಡಿಕೊಂಡರು. ಸಂಸ್ಕೃತದಲ್ಲಿಯ ನಿಯತಯತಿಯನ್ನು ಐಚ್ಛಿಕವಾಗಿ ಭಾವಿಸಿದ್ದು. ಸಂಸ್ಕೃತದಲ್ಲಿಲ್ಲದ ದ್ವಿತೀಯಾಕ್ಷರ ಪ್ರಾಸವನ್ನು ಪಾಲಿಸಿದ್ದು, ಸಂಸ್ಕೃತದಲ್ಲಿರುವಂತೆ ಪಾದಾಂತದಲ್ಲಿ ನಿಲುಗಡೆಯನ್ನು ಕಡ್ಡಾಯವಾಗಿಟ್ಟುಕೊಳ್ಳದೆ ಪಾದ ಮುಂದಕ್ಕೆ ಓಡುವಂತೆ ಮಾಡಿಕೊಂಡದ್ದು-ಇವು ಗಮನಿಸತಕ್ಕ ವ್ಯತ್ಯಾಸಗಳು. ಸಂಸ್ಕೃತ ವರ್ಣವೃತ್ತಗಳ ಧಾಟಿ ಘೋಷಗಳನ್ನು ಪಾಲಿಸುವುದಕ್ಕಾಗಿ ಕನ್ನಡದಲ್ಲಿ ಬಳಸಿದ ಅಂಥ ವರ್ಣವೃತ್ತಗಳಲ್ಲಿಯೂ ಸಂಸ್ಕೃತ ಶಬ್ದಗಳೂ ಹೆಚ್ಚುಹೆಚ್ಚಾಗಿ ಬಳಕೆಗೆ ಬಂದು ಕನ್ನಡ ನುಡಿಗಳು ತಮ್ಮ ಸ್ವರಗಳೊಡನೆ ಎದ್ದುನಿಂತು ಕಾಣದಂತಾಯಿತು-ಎಂಬುದು ನಿಜ. ಕನ್ನಡ ಪದ್ಯಸಾಹಿತ್ಯದಲ್ಲಿ ಬಹು ಪ್ರಚಲಿತವಾಗಿರತಕ್ಕ ವರ್ಣವೃತ್ತಗಳು ಎಂದರೆ ಖ್ಯಾತಕರ್ಣಾಟಕಗಳು ಎಂಬ ಹೆಸರಿನಲ್ಲಿ ರೂಢಿಯಾಗಿರುವ ಈ ಆರು ವೃತ್ತಗಳು : ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಉತ್ಪಲಮಾಲೆ, ಚಂಪಕಮಾಲೆ, ಸ್ರಗ್ಧರೆ, ಮಹಾಸ್ರಗ್ಧರೆ, ಇವು ಸರಿಸುಮಾರು ಪ್ರ.ಶ. 700 ರಿಂದ ಕನ್ನಡ ಶಾಸನಗಳಲ್ಲಿಯೂ ಕಾವ್ಯಗಳಲ್ಲಿಯೂ ಹೆಚ್ಚಾಗಿ ಬಳಕೆಯಲ್ಲಿವೆ. ಇವುಗಳ ಲಕ್ಷಣವನ್ನು ರೂಢಿಯ ಸಂಜ್ಞೆಗಳನ್ನು ಬಳಸಿದ ಪ್ರಸ್ತಾರ ನಿಯಮಕ್ಕೆ ಅನುಗುಣವಾಗಿ ಈ ಸೂತ್ರಗಳಿಂದ ನೆನಪಿಟ್ಟುಕೊಳ್ಳಬಹುದು; (1) ಶಾರ್ದೂಲವಿಕ್ರೀಡಿತ : ಕಣ್ಗೊಪ್ಪಲ್ | ಮಸಜಂ | ಸತಂತ | ಗಮುಮಾ | ಶಾರ್ದೂಲ | ವಿಕ್ರೀಡಿತಂ. | (2) ಮತ್ತೇಭವಿಕ್ರೀಡಿತ : ಸಭರಂ | ನಂಮಯ | ಲಂಗಮುಂ | ಬಗೆಗೊಳಲ್ | ಮತ್ತೇ | ಭವಿಕ್ರೀ | ಡಿತಂ | (3) ಉತ್ಪಲಮಾಲೆ : ಉತ್ಪಲ | ಮಾಲೆಯ | ಪ್ಪುದಭರಂನಭ | ಭಂರಲ | ಗಂ ನೆಗ | ¾ÄÂ್ದರಲ್ | (4) ಚಂಪಕಮಾಲೆ : ನಜಭ | ಜಜಂಜ | ರಂ ಬಗೆ | ಗೊಳುತ್ತಿ | ರೆ ಚಂಪ | ಕಮಾಲೆ | ಯೆಂದಪರ್|| (5) ಸ್ರಗ್ಧರೆ: ತೋರಲ್ ಮಂ | ರಂಭನಂ | ಮೂಯಗ | ಣಮುಮ | ದೆ ತಾಂ ಸ್ರ | ಗ್ಧರಾವೃ | ತ್ತ ಮಕ್ಕುಂ | (6) ಮಹಾಸ್ರಗ್ಧರೆ : ಸತತಂ | ನಂಸಂ ರ | ರಂಗಂ ನೆ | ರೆದೆÀಸೆ | ಯೆ ಮಹಾ | ಸ್ರಗ್ಧರಾ | ವೃತ್ತಮ | ಕ್ಕುಂ || ಇಲ್ಲಿಯ ಪ್ರಸ್ತಾರ ಕ್ರಮವನ್ನು ಪರಿಶೀಲಿಸಿ ಧಾಟಿಯನ್ನರಿತುಕೊಂಡರೆ, ಶಾರ್ದೂಲವಿಕ್ರೀಡಿತ, ಉತ್ಪಲಮಾಲೆ ಮತ್ತು ಸ್ರಗ್ಧರೆಗಳ ಪಾದಾದಿಯ ಗುರವಿಗೆ ಎರಡು ಲಘುಗಳನ್ನಿಟ್ಟು ಕ್ರಮವಾಗಿ ಮತ್ತೇಭವಿಕ್ರೀಡಿತ, ಚಂಪಕಮಾಲೆ ಮತ್ತು ಮಹಾಸ್ರಗ್ಧರೆಗಳನ್ನು ಕನ್ನಡ ಕವಿಗಳು ಮಾಡಿಕೊಂಡಂತೆ ತೋರುವುದು (ಉತ್ಪಲಮಾಲೆ-ಚಂಪಕಮಾಲೆ ಈ ಜೋಡಿಯ ವಿಷಯದಲ್ಲಿ ಮಾತ್ರ, ಚಂಪಕಮಾಲೆಯ ಆದಿ ದ್ವಿಲಘುವಿಗೆ ಒಂದು ಗುರುವನ್ನಿಟ್ಟುಕೊಂಡು ಉತ್ಪಲಮಾಲೆಯನ್ನು ಮಾಡಿಕೊಂಡಿರುವ ಸಾಧ್ಯತೆಯಿದೆ). ಸಂಸ್ಕೃತದಲ್ಲಿ ಪುರ್ವೋಕ್ತವಾದ ಶಾರ್ದೂಲಾದಿಗಳು ಪ್ರಸಿದ್ಧವಾಗಿರುವುದೂ ಮತ್ತೇಭಾದಿಗಳು ಏನೂ ಪ್ರಸಿದ್ಧವಾಗಿಲ್ಲದಿರುವುದೂ ಹೀಗೆ ತಿಳಿಯುವುದಕ್ಕೆ ಎಡೆ ಕೊಟ್ಟಿದೆ.
ಹಳಗನ್ನಡ ಸಾಹಿತ್ಯದಲ್ಲಿ ಕರ್ಣಾಟಕಗಳು (ನೋಡಿ- ಖ್ಯಾತ-ಕರ್ಣಾಟಕಗಳು) ಜೊತೆಗೆ ಅಲ್ಲಲ್ಲಿ ವಿರಳವಾಗಿ ಬಳಸಿರುವ ಇನ್ನೂ ಕೆಲವು ವರ್ಣವೃತ್ತಗಳುಂಟು. ಮಾಲಿನಿ, ಹರಿಣಿ, ಪೃಥ್ವಿ, ಮಲ್ಲಿಕಾಮಾಲೆ, ತರಳ ಮೊದಲಾದವು ಹೀಗೆ ಬಳಕೆಯಾಗಿರತಕ್ಕವು. ಕವಿಯ ಕೌಶಲವನ್ನು ಎತ್ತಿ ತೋರುವುದಕ್ಕಾಗಿಯೋ ರಚನೆಯಲ್ಲಿ ವೈವಿಧ್ಯವನ್ನು ತರುವುದಕ್ಕಾಗಿಯೋ ಒಂದೊಂದು ಕೃತಿಯಲ್ಲಿ ಅಲ್ಲಲ್ಲಿ 1-2 ರಂತೆ ಅಥವಾ ಬೆರಳೆಣಿಕೆಗೆ ಸಿಗುವಷ್ಟು ಮಾತ್ರ ಇವು ಬಂದಿವೆ. ಇಲ್ಲಿಯೂ ಕೆಲವು ಸಂಸ್ಕೃತದಿಂದ ನೇರವಾಗಿ ಪಡೆದಂಥವು, ಕೆಲವು ಸ್ವತಃ ಮಾಡಿಕೊಂಡವು. ಈ ಎರಡು ಬಗೆಗಳೂ ಕಾವ್ಯ ಗ್ರಂಥಗಳಿಗಿಂತ ಶಾಸ್ತ್ರಗ್ರಂಥಗಳಲ್ಲಿ ಕಾಣುವುದೇ ಹೆಚ್ಚು. ಉದಾಹರಣೆಗೆ, ಚಂದ್ರ ರಾಜನ ಮದನ ತಿಲಕ, ಜನ್ನನನ ಅನುಭವಮುಕುರ, ಇತ್ಯಾದಿಗಳನ್ನು ನೋಡಬಹುದು. ಇಂಥ ವೃತ್ತಗಳಲ್ಲಿ ಪ್ರಸಿದ್ಧವಾದವುಗಳ ಲಕ್ಷಣಗಳನ್ನು ಪಿಂಗಲ, ಜಯದೇವಾದರ ಸಂಸ್ಕೃತ ಛಂದೋಗ್ರಂಥಗಳಲ್ಲಿಯೂ ನಾಗವರ್ಮ, ಗುಣಚಂದ್ರಾದ್ಯರ ಕನ್ನಡ ಛಂದೋಗ್ರಂಥಗಳಲ್ಲಿಯೂ ಹೇಳಿದೆ. ಹಳಗನ್ನಡ ಪದ್ಯಗ್ರಂಥಗಳಲ್ಲಿ ಸಮವೃತ್ತಗಳ ಹಾಗೆ ಅಧಿಕ ಸಂಖ್ಯೆಯಲ್ಲಿ, ಅರ್ಧಸಮ ಮತ್ತು ವಿಷಮವೃತ್ತಗಳೂ ಹಾಗೆಯೇ ಉತ್ಕೃತಿಯಿಂದಾಚೆಯ ಮಾಲಾವೃತ್ತಗಳು ಮತ್ತು ದಂಡಕಗಳೂ ಕಂಡುಬರುವುದಿಲ್ಲ. ಕವಿರಾಜಮಾರ್ಗ (ಸು. 850). ಕಾವ್ಯಾವಲೋಕನ (ಸು. 1145), ಚಿಕದೇವರಾಜವಿಜಯ (ಸು. 1700) ಇವುಗಳಲ್ಲಿ ಕ್ರಮವಾಗಿ ಪುಷ್ಟಿತಾಗ್ರ, ನಾಗ, ವಿಯೋಗಿನಿ ಮತ್ತು ವಸಂತಮಾಲಿಕೆ ಈ ಅರ್ಧ ಸಮವೃತ್ತಗಳು ಬಳಕೆಯಾಗಿವೆ. ಮದನತಿಲಕದಲ್ಲಿ ತ್ರಿಪದೋನ್ನತಿಯೆಂಬ ವಿಷಮ ವೃತ್ತಿವಿದೆ. ಗದಾಯುದ್ಧ, ಪಂಪರಾಮಾಯಣ ಮುಂತಾದ ಕೆಲವು ಕಾವ್ಯಗಳಲ್ಲಿ ಲಲಿತವೃತ್ತರವೆಂಬ ಪ್ರಸಿದ್ಧವಾದ ಮಾಲಾವೃತ್ತವನ್ನು ಬಳಸಿದೆ. ಲಲಿತವೃತ್ತವೇ ಲಯಗ್ರಾಹಿಯಾಗಿ ಮುಂದೆ ಚಿಕದೇವರಾಜಬಿನ್ನಪ ಮುಂತಾದ ಕೃತಿಗಳಲ್ಲಿ ಬಂದಿದೆ. ಲೀಲಾವತಿಯಲ್ಲಿ ಮಾತ್ರವರ್ಣ ಮಿಶ್ರ ಚತುಷ್ಪದಿಯಾದ (ಮಾತ್ರಾವೃತ್ತ) ಲಯೋತ್ತರವೆಂಬ ಒಂದು ವೃತ್ತವಿದೆ. ಹೀಗೆಯೇ ಇಂಥ ವೃತ್ತಗಳು ಇನ್ನೂ ಕೆಲವು ಬೇರೆ ಬೇರೆ ಕಾವ್ಯಗಳಲ್ಲಿರಬಹುದು. ಸಂಸ್ಕೃತ ಕಾವ್ಯಗಳ ಶಾಸ್ತ್ರಗಳ ಸುಪ್ರಸಿದ್ಧವಾದ ಶ್ಲೋಕ ಛಂದಸ್ಸು ಕನ್ನಡದಲ್ಲಿ ಕ್ವಚಿತ್ತಾಗಿ ಮಾತ್ರ ಕಾಣುತ್ತದೆ. ಕವಿರಾಜಮಾರ್ಗದಲ್ಲಿ ನಿಯಮಬದ್ಧವಾದ ಕೆಲವು ಶ್ಲೋಕಗಳಿವೆ. ಕಾವ್ಯಾವಲೋಕನದಲ್ಲಿಯೂ ಒಂದು ಶ್ಲೋಕವಿದೆ. ಆದರೆ ಇದರ ಬಳಕೆ ಮುಂದೆ ಹೆಚ್ಚಾಗಿ ಆಗಲಿಲ್ಲ. ಕವಿರಾಜಮಾರ್ಗದಿಂದ ಒಂದು ಉದಾಹರಣೆಯನ್ನು ನೋಡಬಹುದು:
ತಾರಾ ಜಾನಕಿಯಂ ಪೋಗಿ | ತಾರಾ ತರಳ ನೇತ್ರೇಯಂ | ತಾರಾಧಿಪತಿ ತೇಜಸ್ವಿ | ತಾರಾಧಿ ವಿಜಯೋದಯಾ ||
ಇಲ್ಲಿಯ 4 ಪಾದಗಳಲ್ಲಿ, ಪ್ರತಿ ಪಾದದಲ್ಲಿಯೂ 5ನೆಯ ಅಕ್ಷರ ಲಘುವಾಗಿಯೂ 6ನೆಯದು ಗುರುವಾಗಿಯೂ ಇದ್ದು, 7ನೆಯ ಅಕ್ಷರ 1, 3ನೆಯ ಪಾದಗಳಲ್ಲಿ ಗುರುವಾಗಿಯೂ 2, 4ನೆಯ ಪಾದಗಳಲ್ಲಿ ಲಘುವಾಗಿಯೂ ಇರುವುದು ಕಾಣುತ್ತದೆ ; ಕನ್ನಡ ಪದ್ಯಗಳಿಗೆ ಸಹಜವಾದ ಆದಿಪ್ರಾಸವನ್ನಿಟ್ಟುಕೊಂಡಿದೆ.
ಕನ್ನಡ ಸಾಹಿತ್ಯದ ಕಾವ್ಯಶಾಸ್ತ್ರ್ರಾದಿಗ್ರಂಥಗಳಲ್ಲಿ ವಿಶೇಷವಾಗಿ ಬಳಕೆಯಾಗಿರುವ ಕಂದಪದ್ಯವೂ ಅಲ್ಲಿಯೇ ವಿರಳವಾಗಿ ಬಳಕೆಯಾಗಿರುವ ರಗಳೆಯೂ ಈ ಗುಂಪಿನ ಗಣ್ಯವೃತ್ತಗಳಾಗಿವೆ. ಈ ಪದ್ಯಜಾತಿಗಳನ್ನೇ ತನಿಯಾಗಿ ಬಳಸಿ ಕೃತಿರಚನೆ ಮಾಡಿರುವುದೂ ಉಂಟು. ಲಕ್ಷಣಗ್ರಂಥಗಳ ರಚನೆಗೆ ಕಂದಪದ್ಯವನ್ನು ಹೆಚ್ಚಾಗಿ ಬಳಸಿದೆ. ಜನ್ನನ ಯಶೋಧರ ಚರಿತೆ ಕಾವ್ಯವಾಗಿಯೂ ಸಮಗ್ರವಾಗಿ ಕಂದದಲ್ಲಿ ರಚಿತವಾಗಿದೆ. ಹರಿಹರ ಮತ್ತು ಅವನಿಗೆ ಈಚಿನ ಕೆಲವು ಕವಿಗಳು ಬರೆದಿರುವ ಶೈವಪರವಾದ ಕೃತಿಗಳು ರಗಳೆಯಲ್ಲಿ ಬರೆದವಾಗಿವೆ.
ಕಂದ ಪದ್ಯ
ಬದಲಾಯಿಸಿಸಂಸ್ಕೃತದ ಆರ್ಯಾವೃತ್ತವರ್ಗದ ಆರ್ಯಾಗೀತೆಯೇ ಪ್ರಾಕೃತದಲ್ಲಿ ಸ್ಕಂಧಕ (ಖಂಧ ಅ) ಎನ್ನಿಸಿ ಆ ಮೂಲಕವಾಗಿ ಕನ್ನಡಕ್ಕೆ ಬಂದು ಕಂದ ಎಂಬ ಹೆಸರಿನಲ್ಲಿ ರೂಢಿಯಾಗಿರಬೇಕೆಂದು ತೋರುತ್ತದೆ. ಇದರ ಸಾಮಾನ್ಯ ಲಕ್ಷಣ ಹೀಗೆ : 4 ಪಾದಗಳು; ಇವುಗಳಲ್ಲಿ 1, 2ನೆಯ ಪಾದಗಳಂತೆಯೇ 3, 4ನೆಯ ಪಾದಗಳಿರುತ್ತವೆ. 1, 2ನೆಯ ಪಾದಗಳಲ್ಲಿ ಕ್ರಮವಾಗಿ 3, 5ರ ಹಾಗೆ ಒಟ್ಟು 8 ಚತುರ್ಮಾತ್ರಾಗಣಗಳು (12+20=32); 3, 4ನೆಯ ಪಾದಗಳಲ್ಲಿಯೂ ಹೀಗೆಯೇ. ಚತುರ್ಮಾತ್ರಾಗಣಗಳ ಕಟ್ಟು ಕೆಡಬಾರದು. ಪ್ರಥಮಾರ್ಧದ ಹಾಗೂ ದ್ವಿತೀಯಾರ್ಧದ 8ನೆಯ ಗಣಸ್ಥಾನದ ಅಂತ್ಯದಲ್ಲಿ ಗುರು ತಪ್ಪದೆ ಬಂದಿರಬೇಕು. ಈ ಎರಡೂ ಅರ್ಧಗಳ ವಿಷಮ ಸ್ಥಾನಗಳಲ್ಲಿ ಮಧ್ಯಗುರುವಿನ (U-U) ಗಣ ಬರಬಾರದು. ಆದರೆ ಅವುಗಳ 6ನೆಯ ಗಣಸ್ಥಾನಗಳಲ್ಲಿ ಮಧ್ಯಗುರುವಿನ ಗಣವಾಗಲಿ ಸರ್ವಲಘು (UUUU)ವಿನ ಗಣವಾಗಲಿ ತಪ್ಪದೆ ಬಂದಿರಬೇಕು. ಸರ್ವಲಘುವಿನ ಗಣವಾಗಿದ್ದ ಪಕ್ಷದಲ್ಲಿ, ಹಾಗೆಯೇ ಮಧ್ಯಗುರುವಿನ ಗಣ ಎಂದರೆ ಜಗಣವಾಗಿದ್ದ ಪಕ್ಷದಲ್ಲಿಯೂ ಮೊದಲನೆಯ ಹ್ರಸ್ವದ ಮುಂದೆ ಯಂಯಿರಬೇಕು. 7ನೆಯ ಗಣ ಸರ್ವಲಘುವಿನ ಗಣವಾಗಿದ್ದಲ್ಲಿ ಮೊದಲನೆಯ ಹ್ರಸ್ವದಿಂದಲೇ ಹೊಸ ಪದ ಮೊದಲಾಗಬೇಕು. ಲಕ್ಷಣಾನ್ವಿತವಾದ ಕಂದಕ್ಕೆ ಉದಾಹರಣೆ:
ಕಾವೇ|ರಿಯಿಂದ|ಮಾ ಗೋ| ದಾವರಿ|ವರಮಿ|ರ್ಪ. ನಾಡ|ದಾ ಕ|ನ್ನಡದೊಳ್ ಭಾವಿಸಿ|ದ ಜನಪ|ದಂ ವಸು| ಧಾವಳ|ಯ ವಿಲೀ|ನ ವಿಶದ|ವಿಷಯವಿ|ಶೇಷಂ (ಕವಿರಾಜಮಾರ್ಗ)
ರಗಳೆ
ಬದಲಾಯಿಸಿಎರಡನೆಯದು ರಗಳೆ (ನೋಡಿ- ರಗಳೆ). ರಗಳೆ ಮತ್ತು ರಘಟಾ-ಇವು ಸಮಾನಾರ್ಥಕ ಶಬ್ದಗಳು. ಈ ಪದಗಳ ಮೂಲ ಯಾವುದು, ನಿಷ್ಟತ್ತಿಯೇನು ಸರಿಯಾಗಿ ತಿಳಿಯದು. ನಾಗವರ್ಮನೂ, ಜಯಕೀರ್ತಿಯೂ ರಗಳೆ ಛಂದಸ್ಸಿನ ಲಕ್ಷಣವನ್ನು ಹೇಳಿದವರಲ್ಲಿ ಮುಖ್ಯರು. ಮಂದಾನಿಲ, ಲಲಿತ ಮತ್ತು ಉತ್ಸಾಹ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿರುವ ರಗಳೆಯ ಮೂರು ಪ್ರಭೇದಗಳು ಹರಿಹರನ ರಗಳೆಯ ಕಾವ್ಯಗಳಲ್ಲಿ ಮತ್ತು ಈಚೆಗೆ ಹೆಚ್ಚು ಸ್ಪಷ್ಟವಾದ ರೂಪದಲ್ಲಿ ಗೋಚರಿಸುತ್ತವೆ. ಆದರೆ ಇದಕ್ಕೆ ಮೊದಲೇ ಇವನ್ನು ಹೋಲುವ ಕೆಲವು ನಿದರ್ಶನಗಳು ಪಂಪ ರನ್ನ ಮೊದಲಾದ ಪ್ರಾಚೀನ ಕನ್ನಡ ಕವಿಗಳ ಚಂಪುಕಾವ್ಯಗಳಲ್ಲಿ ಕ್ವಚಿತ್ತಾಗಿ ಕಂಡುಬರುತ್ತವೆ. ಇವುಗಳಲ್ಲಿ ಮಂದಾನಿಲ ರಗಳೆಯನ್ನು ಹೋಲುವ 16, 32 ಮುಂತಾಗಿ ಪಾದ ಪ್ರಮಾಣವನ್ನುಳ್ಳ ನಿದರ್ಶನಗಳೇ ಪ್ರಮುಖವಾದವು. ಇವುಗಳ ಲಕ್ಷಣವನ್ನು ಪರಿಶೀಲಿಸಿದಾಗ, ಇವು ಅಪಭ್ರಂಶ ಕಾವ್ಯ ಪ್ರಚಲಿತಗಳಾದ ಪಜ್ಝಟಿಕಾ ಛಂದಸ್ಸನ್ನು ಬಳಸಿ ಕಟ್ಟಿರುವ ಷೋಡಶವಾದ ಪ್ರಮಾಣದ ಕಡವಕಗಳ, ಅನುಕರಣದಿಂದಾಗಿ ಹುಟ್ಟಿರಬೇಕೆಂಬ ಸಂಗತಿ ತಿಳಿದುಬಂದಿದೆ. ಜಯಕೀರ್ತಿಯ ರಘಟಾ ಲಕ್ಷಣದ ಪದ್ಯದಲ್ಲಿ ದೊರೆಯುವ ಒಂದು ಸೂಚನೆಯಿಂದಲೂ ಅಲ್ಲಲ್ಲಿ ಇಂಥ ಪದ್ಯಗಳಿಗೆ ಪದ್ಧತಿ (ಪಜ್ಝಟಿಕೆ) ಎಂಬುದರ ಪ್ರತಿಶಬ್ದವಾಗಿ ಪದ್ದಳಿ, ಪಡ್ದಳಿ ಎಂಬ ರೂಪಗಳು ಮಾತೃಕೆಗಳಲ್ಲಿ ಕಂಡುಬರುವುದರಿಂದಲೂ ಈ ವಿಷಯ ದೃಢಪಟ್ಟಿದೆ. ಕನ್ನಡದ ಪಡ್ದಳಿಯ ರಗಳೆ ಅಪಭ್ರಂಶದ ಪಜ್ಝಟಿಕೆಯ ಕಡವಕಗಳ ಹಾಗೆ. ಹೀಗೆ ಪ್ರಾಕೃತಮೂಲವನ್ನು ಅನುಸರಿಸಿದಾಗ ಸ್ವತಂತ್ರಿಸಿ ಕೆಲವು ವ್ಯತ್ಯಾಸಗಳನ್ನು ಕನ್ನಡದಲ್ಲಿ ಮಾಡಿಕೊಂಡಿದೆ.
I ಪಜ್ಝಟಿಕೆಯ ಛಂದಸ್ಸಿನ ಕಡವಕದ ಒಂದು ಪಾದಯುಗ್ಮ : ಉತ್ತುಂ | ಗಸಿಹರು | ಸುರಗಿರಿ | ಸಮಾಣು ಆಸ|ಣ್ಣು ಗಂಪಿ | ಮಣಹರು | ನಿಮಾಣು (ಣಾಯಕುಮಾರಚರಿಉ)
ಅದೇ ಛಂದಸ್ಸಿನ (ಪದ್ದಳಿ, ಪಡ್ಡಳಿ) ರಗಳೆಯ ಒಂದು ಪಾದಯುಗ್ಮ ; ಸ್ಫುರಿತೇಂದ್ರನೀಲಮಣಿಖಚಿತಭೂಮಿ | ಚೆಲುವಿಂಗಿದು ನೆಟ್ಟನೆ ಜನ್ಮಭೂಮಿ || (ಆದಿಪುರಾಣ)
II ಹೀಗೆಯೇ 4 ತ್ರಿಮಾತ್ರಗಣಗಳಿಂದಾದ ಕಡವಕದ ಒಂದು ಪಾದ ಯುಗ್ಮ : ಕಾಣ|ಕುಂಟ|ಪಿಂಗ|ಲಾಹ| ಅಂಧ|ಮೂಯ|ಪಂಗು|ಲಾಹ|| (ಪುಷ್ಪದಂತನ ಮಹಾಪುರಾಣ)
ಅದನ್ನು ಹೋಲುವ ರಗಳೆಯ ಒಂದು ಪಾದಯುಗ್ಮ : ಅದರ|ಬಳಸಿ|ದುಪವ|ನಂಗ| ಳುದಿತ|ಕೋಕಿ|ಲಸ್ವ|ನಂಗ| (ಅಜಿತಪುರಾಣ)
III ಹೀಗೆಯೇ 4 ಪಂಚಮಾತ್ರಾಗಣಗಳಿಂದಾದ ಕಡವಕದ ಒಂದು ಪಾದಯುಗ್ಮ;
ಪರದರಣೆ | ಪರತರುಣಿ | ಪರದವಿಣ | ಕಂಖಾಎ
ಮರಿಹೀಸಿ | ದುಚ್ಚಾರ | ಖಲಚೋರ | ಸಿಕಾ್ಖಎ || ಅದನ್ನು ಹೋಲುವ ರಗಳೆಯ ಒಂದು ಪಾದಯುಗ್ಮ : ಶ್ರೀಗೆ ಕುಲ|ಸದನಮೆನೆ ತೊಳಪ| ಮಣಿ | ಭವನದೊಳ್ ರಾಗರಸ|ಮೊದವೆ ಸರ|ಸಿರುಹ ಸಮ | ವದನದೊಳ್ || (ಆದಿಪುರಾಣ)
ಚಂಪೂ ಕಾವ್ಯ ಪ್ರಚಲಿತಗಳಾದ, ಕ್ವಚಿತ್ತಾಗಿ ಶಾಸನಗಳಲ್ಲಿಯೂ ಕಾಣುವ ಈ ಮೂರು ಬಗೆಯ ರಗಳೆಗಳಿಗೂ ಅಪಭ್ರಂಶ ಛಂದಸ್ಸಿನಲ್ಲಿ ಕ್ರಮವಾಗಿ ತ್ರಿಕಲ, ಚತುಷ್ಕಲ ಮತ್ತು ಪಂಚಕಲಗಳ ಮೂರು ಬಗೆಯ ಛಂದಸ್ಸುಗಳಿಂದ ಕಟ್ಟಿದ ಕಡವಕಗಳೇ ಪ್ರಾಯಃ ಮೂಲ ಮತ್ತು ಪ್ರೇರಕ ಎಂಬುದು ಇದರಿಂದ ವಿಶದಪಡುತ್ತದೆ. ಇವುಗಳಿಗೆ ರಗಳೆಯೆಂಬ ಸಾಮಾನ್ಯವಾಚಕವಿದ್ದುದು ಸ್ಪಷ್ಟ; ಆದರೆ ಪ್ರಭೇದಗಳಿಗೆ ಪ್ರತ್ಯೇಕವಾಗಿ ಗೊತ್ತಾದ ಹೆಸರುಗಳಿದ್ದಂತೆ ತೋರುವುದಿಲ್ಲ, 3, 4 ಮತ್ತು 5 ಮಾತ್ರೆಗಳ ಈ ರಗಳೆಗಳಲ್ಲಿ ಪಾದಸಂಖ್ಯೆ, ಪ್ರಾಸವಿನ್ಯಾಸ, ಅಂತ್ಯಗಣ ನಿಯಮ ಮೊದಲಾದವುಗಳಲ್ಲಿ ಪ್ರಾಚೀನ ಕನ್ನಡ ಕವಿಗಳು ಅಪಭ್ರಂಶ ಕವಿಗಳ ಹಾಗೆಯೇ ತಾವೂ ವ್ಯತ್ಯಾಸಗಳನ್ನೂ ವೈವಿಧ್ಯಗಳನ್ನೂ ಕಾಣಿಸಿದ್ದಾರೆ, ಇವು 12ನೆಯ ಶತಮಾನದಲ್ಲಿ ಹರಿಹರನ ಕೈಯಲ್ಲಿ ಬಲುಮಟ್ಟಿಗೆ ಒಂದು ಸ್ಥಾಯಿಯಾದ ರೂಪವನ್ನು ಪಡೆದುಕೊಂಡು ಉತ್ಸಾಹ, ಮಂದಾನಿಲ ಮತ್ತು ಲಲಿತವೆಂಬ ಹೆಸರಿಂದ ಮುನ್ನೆಲೆಗೆ ಬಂದುವು. ವರ್ಣನೆ ಕಥನಗಳಿಗೆ ಚೆನ್ನಾಗಿ ಒಗ್ಗುವ ಈ ಛಂದಸ್ಸುಗಳನ್ನು ಕಾವ್ಯರಚನೆಗೆ ಪ್ರಮುಖವಾದ ಛಂದಸ್ಸಾಗಿ ಆತ ಯೋಜಿಸಿ ಅವಕ್ಕೆ ಮಹತ್ತ್ವವನ್ನು ತಂದುಕೊಟ್ಟ, ಬಲುಮಟ್ಟಿಗೆ ನಿಯತ ಇಲ್ಲವೆ ಅಲ್ಪಸಂಖ್ಯೆಯ ಪಾದ ಪ್ರಮಾಣ, ಅಂತ್ಯಪ್ರಾಸನಿಬದ್ಧತೆ, ಹೊಂದಾಣಿಕೆಯ ಮಾತ್ರಾಲಯ, ಪಾದಾಂತದಲ್ಲಿ ಪದ ಮುಗಿಯದೆ ಮುಂದಿನ ಪದಕ್ಕೋಡುವುದು, ಅಂತ್ಯಗಣ ನಿಯಮಬದ್ಧತೆ, ಇವುಗಳ ಸ್ಥಾನದಲ್ಲಿ ಅನಿಯತ ಹಾಗೂ ಅಧಿಕಸಂಖ್ಯೆಯ ಪಾದಪ್ರಮಾಣ, ಆದ್ಯಂತ ಪ್ರಾಸಬದ್ಧತೆ, ಖಚಿತವಾದ ಮಾತ್ರಾಲಯ, ತಾಳಗತಿಗೆ ಅಡ್ಡಿಯಾಗದಂತೆ ಗಣೋಪಸಂಹಾರ-ಇವು ಹರಿಹರಾದ್ಯರು ಬಳಸಿದ ಉತ್ಸಾಹಾದಿ ರಗಳೆಗಳ ಸಾಮಾನ್ಯ ಲಕ್ಷಣಗಳಾದುವು.
ಉತ್ಸಾಹದ ಸಾಮಾನ್ಯ ಲಕ್ಷಣ : ಒಂದು ರೀತಿ 4 ತ್ರಿಮಾತ್ರಾಗಣಗಳಂತೆ ಪಾದಕ್ಕೆ 12 ಮಾತ್ರೆಗಳು : ಕುಳಿರ್ವ|ಪೊಗೊ|ಳಂಗ|ಳಲ್ಲಿ ತಳಿರ|ಕಾವ|ಣಂಗ|ಳಲ್ಲಿ (ಕಬ್ಬಿಗರ ಕಾವ)
ಇನ್ನೊಂದು ರೀತಿ 8 ತ್ರಿಮಾತ್ರಾಗಣಗಳಂತೆ ಪಾದಕ್ಕೆ 24 ಮಾತ್ರೆಗಳು : ಮಗನ| ಕರೆಯ|ಲಂದು| ಶಂಕೆ|ಯಿಲ್ಲ|ದಿರ್ದ|ರೆಳ್ದು| ಪೋಗಿ ಮಗನೆ| ಮಗನೆ| ಬಾರೆ| ನುತ್ತ| ತಂದೆ| ಕರೆದು| ನೋಡಿ | ಬೀಗಿ|| (ಸಿರಿಯಾಳನ ರಗಳೆ)
ಮಂದಾನಿಲದ ಸಾಮಾನ್ಯಲಕ್ಷಣ : 4 ಚತುರ್ಮಾತ್ರಾಗಣಗಳಂತೆ ಪಾದಕ್ಕೆ 16 ಮಾತ್ರೆಗಳು : ಪಂಕಜ|ದಂತಿರೆ|ಪುಟ್ಟಿದ|ಳೊಲವಿಂ| ಪಂಕವ|ನೆಂದುಂ|ಪೊರ್ದದೆ|ನಲವಿಂ|| (ಆದಯ್ಯನ ರಗಳೆ)
ಲಲಿತದ ಸಾಮಾನ್ಯ ಲಕ್ಷಣ : 4 ಪಂಚಮಾತ್ರಾಗಣಗಳಂತೆ ಪಾದಕ್ಕೆ 20 ಮಾತ್ರೆಗಳು: ಸೊಂಪಿನಿಂ| ಕಂಪಿಡುವ| ಸಂಪಗೆಗ| ಳಂ ಕೊಂಡು ಹೊಂಪೆಸೆವ| ಹೊಂಗೇದ| ಗೆಯ ಹೂಗ| ಳಂ ಕೊಂಡು| (ಬಸವರಾಜದೇವರ ರಗಳೆ)
ಅಚ್ಚ ಕನ್ನಡ ಛಂದಸ್ಸಿನ ಮಟ್ಟುಗಳು
ಬದಲಾಯಿಸಿಇವನ್ನು ನಾಗವರ್ಮ ಕರ್ಣಾಟಕ ವಿಷಯಜಾತಿವೃತ್ತ ಎಂದೂ ಜಯಕೀರ್ತಿ ಕರ್ಣಾಟ ವಿಷಯಭಾಷಾಜಾತಿ ಎಂದೂ ಕರೆದಿದ್ದಾರೆ. ಕನ್ನಡನಾಡಿನ ಅಥವಾ ಕನ್ನಡನಾಡಿನ ಭಾಷೆಯಲ್ಲಿರುವ ಜಾತಿವೃತ್ತ (ಜಾತಿ)ಗಳು ಎಂದರೆ ಸಂಸ್ಕೃತೇತರವಾದ ವೃತ್ತಗಳು ಎಂದು ಇದರ ಅರ್ಥ. ಅಕ್ಕರ, ತ್ರಿಪದಿ, ಏಳೆ, ಚೌಪದಿ, ಛಂದೋವತಂಸ, ಅಕ್ಕರಿಕೆ, ಮದನವತಿ, ಗೀತಿಕೆ, ಉತ್ಸಾಹ, ಷಟ್ಟದಿ-ಈ ಹತ್ತು ಮುಖ್ಯವಾಗಿ ಮಟ್ಟುಗಳನ್ನು ನಾಗವರ್ಮ ಹೇಳಿದ್ದಾನೆ. ಜಯಕೀರ್ತಿಯೂ ಇವನ್ನು ಹೇಳಿದ್ದಾನೆ. ಉತ್ಸಾಹವೆಂಬೊಂದು ಬಗೆಯನ್ನು ಮಾತ್ರ ಈತ ಮಿಶ್ರಾಧಿಕಾರದಲ್ಲಿ ಕೊಟ್ಟಿದ್ದಾನೆ. 3ನೆಯ ಸೋಮೇಶ್ವರನ ಮಾನಸೋಲ್ಲಾಸದಲ್ಲಿ ತ್ರಿಪದಿ ಷಟ್ಟದಿಗಳ ಉಲ್ಲೇಖವಿದೆ. ಶಾಙರ್ಗ್‌ದೇವನ ಸಂಗೀತರತ್ನಾಕರದಲ್ಲಿ ಆ ಎರಡನ್ನೂ ಒಳಕೊಂಡು ಏಳೆಯ ವಿಚಾರ ಬಂದಿದೆ. ಈ ಮಟ್ಟಗಳಲ್ಲಿ ಕೆಲವು ಮಾತ್ರ ಪ್ರಾಚೀನ ಶಾಸನಗಳಲ್ಲಿಯೂ ಕಾವ್ಯಗಳಲ್ಲಿಯೂ ಬಳಕೆಯಾಗಿವೆ. ಕೆಲವಕ್ಕೆ ನಿದರ್ಶನಗಳು ದೊರೆತಿಲ್ಲ. ಏಳೆ-ತ್ರಿಪದಿಗಳಿಗೂ ಪಿರಿಯಕ್ಕರ-ಅಕ್ಕರಭೇದಗಳಿಗೂ ಒಂದಕ್ಕೊಂದು ಸಂಬಂಧವಿರುವಂತೆ ತೋರುತ್ತದೆ. ಉಳಿದವುಗಳು ಅಂಶಗಣದ ಜಾಯಮನವನ್ನನುಸರಿಸಿ ಬೇರೆ ಬೇರೆಯಾಗಿಯೇ ಹುಟ್ಟಿರಬಹುದು. ಅಕ್ಕರ : ಇದರಲ್ಲಿ ಪಿರಿಯಕ್ಕರ, ದೊರೆಯಕ್ಕರ, ನಡುವಣಕ್ಕರು, ಎಡೆಯಕ್ಕರ ಮತ್ತು ಕಿರಿಯಕ್ಕರ ಎಂದು ಐದು ಪ್ರಭೇದಗಳಿವೆ. ಸಂಸ್ಕೃತದಲ್ಲಿ ಇವಕ್ಕೆ ಕ್ರಮವಾಗಿ ಮಹಾಕ್ಷರ, ಸಮಾನಾಕ್ಷರ, ಮಧ್ಯಾಕ್ಷರ, ಅಂತರಾಕ್ಷರ ಮತ್ತು ಅಲ್ಪಾಕ್ಷರ-ಎಂಬುವು ಪ್ರತಿನಾಮಗಳು. ಹಾಗೆಯೇ ತೆಲುಗಿನಲ್ಲಿ ಕ್ರಮವಾಗಿ ಮಹಾಕ್ಕರ, ಮಧ್ಯಾಕ್ಕರ, ಮಧುರಾಕ್ಕರ, ಅಂತರಾಕ್ಕರ, ಅಲ್ಪಾಕ್ಕರ ಎಂಬ ಹೆಸರುಗಳನ್ನು ಹೇಳಿದ.
ಪಿರಿಯಕ್ಕರ
ಬದಲಾಯಿಸಿಅಕ್ಕರ ಭೇದಗಳಲ್ಲಿ ಪ್ರಸಿದ್ಧವಾದುದು, ದೊಡ್ಡದು, ಪ್ರಾಚೀನ ಶಾಸನಗಳಲ್ಲೂ ಕಾವ್ಯಗಳಲ್ಲೂ ಕಂಡುಬಂದಿದೆ. ಸಾಮಾನ್ಯಲಕ್ಷಣ: 4 ಪಾದಗಳು, ಪ್ರತಿಪಾದದಲ್ಲಿ 1 ಬ್ರ, 5ವಿ, 1 ರು-ಹೀಗೆ 7 ಗಣಗಳು. ಆದರೆ ಕರ್ತೃವಿನಿಷ್ಟವನ್ನನುಸರಿಸಿ ಯಾವುದೇ ಪಾದದಲ್ಲಿ 2ನೆಯ ಮತ್ತು 4ನೆಯ ಗಣ ವಿಷ್ಣುವಿಗೆ ಬದಲಾಗಿ ಬ್ರಹ್ಮವಾಗಿರುವುದು. ಇದು ಲಾಕ್ಷಣಿಕರು ಕೊಡುವ ಸಾಮಾನ್ಯ ನಿಯಮ. ಆದರೆ ಹಾಡಿಗೆ ಹೊಂದಿ ಪರ್ಯಾಯ ಗಣಗಳು ಯಾವುದೇ ಗಣಸ್ಥಾನದಲ್ಲಿ ಬರುವುದು ಸಾಧ್ಯ. ನಿದರ್ಶನಗಳಿಗೆ ನೋಡಿ - ಆದಿಪು. 2-44; 6-27; ಪಂಪಭಾ. 5-26, 42; 7-28; ಶಾಂತಿಪು. 10-9) ಉದಾಹರಣೆಗೆ ಒಂದು ಸಾಲು: ಬೀರ|ದಳವಿಯ|ನನ್ನಿಯ|ಚಾಗದ |ಶಾಸನಂ| ಚಂದ್ರಾರ್ಕ| ತಾರಂಬರಂ (ಪಂಪಭಾರತ)
ದೊರೆಯಕ್ಕರ
ಬದಲಾಯಿಸಿಸಮಸಂಖ್ಯೆಯ (ಅಥವಾ ಸಮಾನ ಯೋಜನೆಯ ಗಣಗಳು ಬರುವುದು ಸಾಮಾನ್ಯಲಕ್ಷಣ : 4 ಪಾದಗಳು; ಪ್ರತಿಪಾದದಲ್ಲಿ 2 ವಿ, 1 ಬ್ರ, 2 ವಿ, 1ಬ್ರ- ಹೀಗೆ 6 ಗಣಗಳು, ಇಲ್ಲಿಯೂ ಯಾವುದೇ ಗಣಸ್ಥಾನದಲ್ಲಿ ಪರ್ಯಾಯ ಗಣಗಳು ಬರುವುದು ಸಾಧ್ಯ. ಅಸಗ ಕವಿಯ ಕರ್ಣಾಟಕುಮಾರಸಂಭವ ಕಾವ್ಯದಲ್ಲಿ ಇದನ್ನು ಬಳಸಿದೆಯೆಂದು ಜಯಕೀರ್ತಿ ತಿಳಿಸಿದ್ದಾನೆ. ಆದರೆ ಆ ಕಾವ್ಯ ದೊರೆತಿಲ್ಲ. ಅನ್ಯತ್ರ ಇದರ ಉದಾಹರಣೆಯಿಲ್ಲ. ನಿದರ್ಶನಕ್ಕೆ ಲಕ್ಷಣಪದ್ಯದ ಒಂದು ಸಾಲು: ಸರಸಿಜೋ|ದರ ಗಣ|ಮೆರಡ|ಜನುಮಲ್ಲಿ| ನರೆದಿರ್ಕೆ| ಮತ್ತಂ (ಛಂದೋಂಬುಧಿ)
ನಡುವಕ್ಕರ
ಬದಲಾಯಿಸಿಗಣಸಂಖ್ಯೆಯ ದೃಷ್ಟಿಯಿಂದ ಅಕ್ಕರಭೇದಗಳಲ್ಲಿ ಮಧ್ಯೆ ಇದು ನಿಲ್ಲುವುದು. ಸಾಮಾನ್ಯಲಕ್ಷಣ: 4 ಪಾದಗಳು; ಪ್ರತಿಪಾದದಲ್ಲಿ 1 ಬ್ರ, 3 ವಿ, 1ರು-ಹೀಗೆ 5 ಗಣಗಳು. ಇಲ್ಲಿಯೂ ಪರ್ಯಾಯ ಗಣಗಳು ಬರುವುದು ಸಾಧ್ಯ. ಕರ್ಣಾಟ ಮಾಲತೀಮಾಧವವೆಂಬ ಕಾವ್ಯದಲ್ಲಿ ಇದನ್ನು ಬಳಸಿದೆಯೆಂದು ಜಯಕೀರ್ತಿ ತಿಳಿಸಿದ್ದಾನೆ. ಆದರೆ ಆ ಕಾವ್ಯ ದೊರೆತಿಲ್ಲ. ಚಂದ್ರರಾಜನ ಮದನತಿಲಕದಲ್ಲಿ ಒಂದು ಪದ್ಯವಿದೆ. ನಿದರ್ಶನಕ್ಕೆ ಒಂದು ಸಾಲು : ನುಡಿಗು|ಮೋಪನ|ಪಡೆಮಾತ|ನಾತನಿ|ರ್ದೆಡೆಗೆ ವಕ್ಕುಂ| (ಮದನತಿಲಕ)
ಎಡೆಯಕ್ಕರ
ಬದಲಾಯಿಸಿಸಾಮಾನ್ಯಲಕ್ಷಣ : 4 ಪಾದಗಳು; ಪ್ರತಿಪಾದದಲ್ಲಿ 1 ಬ್ರ 2 ವಿ, 1 ರು-ಹೀಗೆ ನಾಲ್ಕು ಗಣಗಳು. ಇಲ್ಲಿಯೂ ಪರ್ಯಾಯಗಳು ಬರುವುದು ಸಾಧ್ಯ. ಕರ್ಣಾಟೇಶ್ವರಕಥಾ ಮತ್ತು ಇತರ ಜೈನಕೃತಿಗಳಲ್ಲಿ ಇದರ ಬಳಕೆಯಾಗಿದೆಯೆಂದು ಜಯಕೀರ್ತಿ ತಿಳಿಸಿದ್ದಾನೆ. ಆದರೆ ಅವು ಯಾವುವೂ ನಮಗೆ ದೊರೆತಿಲ್ಲ. ಚಂದ್ರರಾಜನ ಮದನತಿಲಕದಲ್ಲಿ ಒಂದು ಪದ್ಯವಿದೆ. ನಿದರ್ಶನಕ್ಕೆ ಒಂದು ಸಾಲು : ಕರಜ|ಮೆರಡರಿಂ|ಬೆಕ್ಕು ಪಾ| (ಯ್ವಾ)ಪಾಂಗಿನಿಂ| (ಮದನತಿಲಕ)
ಕಿರಿಯಕ್ಕರ
ಬದಲಾಯಿಸಿಅಕ್ಕರಭೇದಗಳಲ್ಲಿ ಎಲ್ಲಕ್ಕಿಂತ ಚಿಕ್ಕದು, ಸಾಮಾನ್ಯಲಕ್ಷಣ: 4 ಪಾದಗಳು; ಪ್ರತಿಪಾದದಲ್ಲಿ 2ವಿ, 1ರು-ಹೀಗೆ 3 ಗಣಗಳು. ಪರ್ಯಾಯ ಗಣಗಳು ಬರಬಹುದು. ಉದಾಹರಣೆ ದೊರೆಯುವುದು ಎಂದು ಜಯಕೀರ್ತಿ ತಿಳಿಸುವ ಶೃಂಗಾರಪಿಂಡದಂಥ ಕನ್ನಡ ಕಾವ್ಯಗಳು ಈಗ ದೊರೆಯುವುದಿಲ್ಲ. ನಿದರ್ಶನಕ್ಕೆ ಲಕ್ಷಣಪದ್ಯದ ಒಂದು ಸಾಲು : ಪೊಡೆಯಲ|ರವರಿರ್ವರ್|ಮೊದಲೊಳಿರ್ಕೆ| (ಛಂದೋಂಬುಧಿ)
ತ್ರಿಪದಿ
ಬದಲಾಯಿಸಿಪ್ರಾಚೀನ ಶಾಸನಗಳಲ್ಲಿ ಮತ್ತು ಕಾವ್ಯಗಳಲ್ಲಿ ವಿರಳವಾಗಿಯೂ ಜಾನಪದ ಸಾಹಿತ್ಯದಲ್ಲಿ ಹೇರಳವಾಗಿಯೂ ಕಂಡುಬರುವ ಜನಪ್ರಿಯವಾದ ಅಚ್ಚಕನ್ನಡ ಮಟ್ಟು. ನಡುಗನ್ನಡ ಕಾಲದಲ್ಲಿಯೂ ಈಚೆಗೆ ಹೊಸಗನ್ನಡ ಕಾಲದಲ್ಲಿಯೂ ಈ ಮಟ್ಟಿನಲ್ಲಿಯೇ ಕೆಲವು ಸ್ವತಂತ್ರವಾದ ಕೃತಿಗಳು ಕೂಡ ಹುಟ್ಟಿವೆ. ಪ್ರಸಿದ್ಧವಾಗಿರುವ ಸರ್ವಜ್ಞನ ಪದಗಳು ತ್ರಿಪದಿಯ ಛಂದಸ್ಸಿನಲ್ಲಿಯೇ ಕಟ್ಟಿದವಾಗಿವೆ. ತ್ರಿಪದಿಸಾಹಿತ್ಯದ ಇತಿಹಾಸವನ್ನು ಪರಿಶೀಲಿಸಿದಾಗ, ಅದರಲ್ಲಿ ಎರಡು ಘಟ್ಟಗಳು ತೋರುತ್ತವೆ. ಮೊದಲನೆಯದು ಅಂಶಗಣಾತ್ಮಕವಾದುದು. ಎರಡನೆಯದು ಮಾತ್ರಾಗಣಾತ್ಮಕವಾದುದು. ಪ್ರಾಚೀನ ಕನ್ನಡ ಶಾಸನಗಳ, ಕಾವ್ಯಗಳ ಹಾಗೂ ಜನಪದ ಸಾಹಿತ್ಯದ ತ್ರಿಪದಿಗಳು ಬಲುಮಟ್ಟಿಗೆ ಅಂಶಗಣಾತ್ಮಕವಾಗಿವೆ. ಸು. 12ನೆಯ ಶತಮಾನದಿಂದೀಚೆಗೆ ಕೆಲವು ವೀರಶೈವ ವಚನಕಾರರ ರಚನೆಗಳಾಗಿ ತ್ರಿವಿಧಿ ಎಂಬ ಹೆಸರನ್ನೊಳಗೊಂಡು ಬಂದಿರುವ ಕೆಲವು ಕೃತಿಗಳೂ ಕ್ವಚಿತ್ತಾಗಿ ನಡುಗನ್ನಡ ಕಾಲದ ಇನ್ನೂ ಕೆಲವು ಕೃತಿಗಳೂ ಬಲುಮಟ್ಟಿಗೆ ಮಾತ್ರಾಗಣಾತ್ಮಕವಾದವಾಗಿವೆ. ಮೊದಲು ಅಂಶಗಣಾತ್ಮಕವಾಗಿದ್ದ ತ್ರಿಪದಿಯೇ ಕಾಲಕ್ರಮದಲ್ಲಿ ತನ್ನ ಮೂಲ ಸ್ವರೂಪದ ಜೊತೆಗೆ ಮಾತ್ರಾಗಣಾತ್ಮಕವಾಗಿಯೂ ಮಾರ್ಪಟ್ಟಿತೆಂದು ತಿಳಿಯುತ್ತದೆ. ಇದರಿಂದ ತ್ರಿಪದಿಗೆ ಎರಡು ರೀತಿಯ ಲಕ್ಷಣ ಏರ್ಪಟ್ಟಿತು.
ಅಂಶಗಣಾತ್ಮಕವಾದ ತ್ರಿಪದಿ
ಬದಲಾಯಿಸಿನಾಗವರ್ಮಾದಿಗಳ ಕಾಲಕ್ಕೆ ತ್ರಿಪದಿ ಶುದ್ಧವಾಗಿ ಅಂಶಗಣಾತ್ಮಕವಾಗಿಯೇ ಇದ್ದಿತು. ನಾಗವರ್ಮ, ಜಯಕೀರ್ತಿ, ಸೋಮೇಶ್ವರ, ಶಾಙರ್ಗ್‌ದೇವ ಇವರು ಸಮಾನವಾಗಿ ಇದರ ಲಕ್ಷಣವನ್ನು ನಿರೂಪಿಸಿದ್ದಾನೆ. ಇವರ ನಿರೂಪಣೆಗಳಲ್ಲಿ ತ್ರಿಪದಿಯ ಎಲ್ಲ ಲಕ್ಷಣಾಂಶಗಳೂ ಪುರ್ತಿಯಾಗಿ ಬಂದಿಲ್ಲ. ಲಾಕ್ಷಣಿಕರು ಕೊಡುವ ಅಂಶಗಣದ ಮಟ್ಟುಗಳೆಲ್ಲೆಲ್ಲ ಇದು ಸಹಜ. ನಾಗವರ್ಮನೂ ಜಯ ಕೀರ್ತಿ ಮತ್ತು ಇತರ ಸಂಸ್ಕೃತ ಲಾಕ್ಷಣಿಕರೂ ಕೊಡುವ ಲಕ್ಷಣಾಂಶಗಳನ್ನೆಲ್ಲ ಒಗ್ಗೂಡಿಸಿ ಶಾಸನಗಳಲ್ಲಿ ಕಾವ್ಯಗಳಲ್ಲಿ ಹಾಗೂ ಜಾನಪದ ಸಾಹಿತ್ಯದಲ್ಲಿ ದೊರೆಯುವ ನಿದರ್ಶನಗಳನ್ನು ನೇರವಾಗಿ ಪರಿಶೀಲಿಸಿ, ಸಮನ್ವಯ ಮಾಡಿದಾಗ ಅಂಶಗಣದ ತ್ರಿಪದಿಯ ಸಾಮಾನ್ಯಲಕ್ಷಣವನ್ನು ಹೀಗೆ ಹೇಳಬಹುದು: 3 ಪಾದಗಳು; ಅವುಗಳಲ್ಲಿ ಅನುಕ್ರಮವಾಗಿ 4, 4, 3 ಹೀಗೆ ಒಟ್ಟು 11 ಗಣಗಳು : ಇವುಗಳಲ್ಲಿ 6, 10ನೆಯದು ಬ್ರಹ್ಮ, ಉಳಿದವು ವಿಷ್ಣು; ಮೊದಲನೆಯ ಪಾದದಲ್ಲಿ 2ನೆಯ ಗಣವಾದ ಮೇಲೆ ಯತಿ, 3ನೆಯ ಗಣದಲ್ಲಿ ದ್ವಿತೀಯಾಕ್ಷರ ಪ್ರಾಸದ ಆವೃತ್ತಿ (ಒಳಪ್ರಾಸ); ಎರಡನೆಯ ಪಾದದಲ್ಲಿ ಮೊದಲ 3 ಗಣಗಳನ್ನು ಹೇಳಿ, ನಿಲ್ಲಿಸಿ, ಈಗ ಮತ್ತೆ ಹಿಂದಕ್ಕೆ ಬಂದು ಆ ಪಾದದ ಆ 3 ಗಣಗಳನ್ನೂ 4ನೆಯ ಗಣವನ್ನೂ ಒಟ್ಟಿಗೆ ಹೇಳಿ, ಬಳಿಕ 3ನೆಯ ಪಾದವನ್ನು ಮುಗಿಸಬೇಕು.
ಇಷ್ಟನ್ನು ಸಾಮಾನ್ಯವಾಗಿ ಹೇಳಿದರೂ ಅಂಶಗಣದ ಜಾಯಮಾನಕ್ಕೆ ತಕ್ಕಂತೆ ಎಲ್ಲ ತ್ರಿಪದಿಗಳೂ ಈ ನಿಯಮವನ್ನು ಅನುಸರಿಸಿರುವುದಿಲ್ಲ. ಹಾಡಿನ ಗತಿಗೆ ಹೊಂದಿ, ವಿಷ್ಣುಗಳ ಸ್ಥಾನದಲ್ಲಿ ಸಾಮಾನ್ಯವಾಗಿ ಬ್ರಹ್ಮವೋ ರುದ್ರವೋ ಬರಬಹುದು, 6, 10ನೆಯ ಬ್ರಹ್ಮಗಳ ಸ್ಥಾನ ಬಲುಮಟ್ಟಿಗೆ ನಿಯತವಾದದ್ದಾದರೂ ಅಲ್ಲಿಯೂ ವಿರಳವಾಗಿ ವಿಷ್ಣುವೂ ರುದ್ರವೂ ಬರುವುದು ಸಾಧ್ಯ. ದ್ವಿತೀಯಾಕ್ಷರಪ್ರಾಸ ಒಳಪ್ರಾಸ ತಪ್ಪದೆ ಪಾಲಿತವಾಗಿದ್ದೂ ವಿರಳವಾಗಿ ಪಾಲಿತವಾಗದೆ ಇರುವುದೂ ಉಂಟು. ಪುನರಾವರ್ತನೆಯ ಪದ್ಧತಿಯಲ್ಲಿಯೂ ಒಟ್ಟಿನಲ್ಲಿ ತ್ರಿಪದಿಯ ಹಾಡಿಕೆಯಲ್ಲಿಯೂ ಬೇರೆ ಬೇರೆ ಧಾಟಿಗಳುಂಟು. ಪುರ್ವೋಕ್ತವಾದ ಗಣನಿಯಮ ಪ್ರಾಸನಿಯಮಗಳು ಗ್ರಾಂಥಿಕ ತ್ರಿಪದಿಗಳಲ್ಲಿ ಸಾಮಾನ್ಯವಾಗಿ ವಿರಳವಾದ ಅಪವಾದಗಳೊಡನೆ ನಿಶ್ಚಿತವಾಗಿ ಪಾಲಿತವಾಗಿರುತ್ತವೆ ; ಜಾನಪದ ತ್ರಿಪದಿಗಳಲ್ಲಿ ಹಾಗಿಲ್ಲ; ಸ್ವಾತಂತ್ರ್ಯ ಮೂಲವಾದ ಶೈಥಿಲ್ಯ ಹೆಚ್ಚು.
ತ್ರಿಪದಿ ಹೇಗೆ ಹುಟ್ಟಿತು? ಹಾಡಿಕೆಯಲ್ಲಿ ಏಳೆಯ 2ನೆಯ ಪಾದದ ಪುನರಾವರ್ತನೆ ಕಾರಣವಾಗಿ, ಒಂದು ಗಣ ಕೂಡಿ ಇಡಿಯ ಏಳೆಯೇ ಮತ್ತೆ ಮಗುಚಿ ಬಂದಂತಾಗಿ ಪ್ರಾಯಃ ತ್ರಿಪದಿ ಕಾಣಿಸಿಕೊಂಡಿರುವುದು ಸಾಧ್ಯ. 2ನೆಯ ಪಾದದ 3 ಗಣಗಳ ಪುನರಾವೃತ್ತಿಯನ್ನು ಬಿಟ್ಟರೆ 2 ಪಾದಗಳ ಸಾಹಿತ್ಯ ಉಳಿಯುತ್ತವೆ. ಇಲ್ಲವೆ ಹಾಡಿಕೆಯಲ್ಲಿ ಏಳೆಯ 2ನೆಯ ಪಾದದ 3 ಗಣಗಳನ್ನು ಹೇಳಿ ಮುಗಿಸುತ್ತಿದ್ದಂತೆ ಮೀಟಿಗೆ ಇನ್ನೊಂದು ಗಣ ಕೂಡಿ, ಅದೇ ಪಾದದ ಮೊದಲ ಮೂರು ಗಣಗಳು ಇನ್ನೊಮ್ಮೆ ಆವೃತ್ತಿಗೊಂಡು ತ್ರಿಪದಿಯಾಗಿರುವುದು ಸಾಧ್ಯ. ಸಾಮಾನ್ಯಲಕ್ಷಣಕ್ಕೆ ಒಪ್ಪುವ ಒಂದು ಉದಾಹರಣೆ : ಎಂಟೆಲೆ | ಮಾವಿನ | ದಂಟಿನ|ಲ್ಲಿರುವೋಳೆ ಘಂಟೆಯ | ಗತಿಗೆ | ನಲಿಯೋಳೆ | ಸರಸಾತಿ ಗಂಟಲ | ತೊಡರ | ಬಿಡಿಸವ್ವ | (ಜನಪದ ಗೀತೆ)
ಮಾತ್ರಾಗಣಾತ್ಮಕವಾದ ತ್ರಿಪದಿ
ಬದಲಾಯಿಸಿಇದರ ಲಕ್ಷಣವನ್ನು ಪ್ರಾಚೀನರಾರೂ ಹೇಳಿಲ್ಲ. 12ನೆಯ ಶತಮಾನದ ವಚನಕಾರರ ತ್ರಿವಿಧಿಗಳಿಂದ, ಕೆಲಮಟ್ಟಿಗೆ ಸರ್ವಜ್ಞನ ತ್ರಿಪದಿಗಳಿಂದ ಕ್ವಚಿತ್ತಾಗಿ ಜನಪದಸಾಹಿತ್ಯ ಮತ್ತು ಕಾವ್ಯದ ನಿದರ್ಶನಗಳಿಂದ ಇದರ ಸ್ವರೂಪವನ್ನು ತಿಳಿಯಬೇಕಾಗುತ್ತದೆ. ವಿಷ್ಣುಗಣಗಳು ಸಾರ್ವತ್ರಿಕವಾಗಿ (6, 10ನೆಯ ಸ್ಥಾನ ಬಿಟ್ಟು ಅಥವಾ ಸೇರಿ) ಪಂಚಮಾತ್ರಾಗಣಗಳಾಗಿದ್ದಾಗ, ವಿಷ್ಣುಗಳ ಸ್ಥಾನದಲ್ಲಿ ವಿಶೇಷವಾಗಿ 4 ಅಥವಾ 5 ಅಕ್ಷರಗಳ ಪಂಚಮಾತ್ರಾಗಣಗಳು ಬಂದಾಗ, ಹೇಳುವ ಧಾಟಿ ವಾಚ್ಯವಾಗಿ, ಮಾತ್ರಾತ್ರಿಪದಿಯ ಗುರುತು ಹತ್ತುತ್ತದೆ. ಸಾಮಾನ್ಯಲಕ್ಷಣ : 3 ಪಾದಗಳು; ಅವುಗಳಲ್ಲಿ ಅನುಕ್ರಮವಾಗಿ 4, 4, 3-ಹೀಗೆ ಒಟ್ಟು 11 ಗಣಗಳು; ಇವುಗಳಲ್ಲಿ 6 ಮತ್ತು 10ನೆಯವು 3 ಮಾತ್ರೆಯ ಗಣ (ಕೆಲವರು ಇದನ್ನು ಬ್ರಹ್ಮಗಣ ಎಂದು ಗ್ರಹಿಸುವುದೂ ಉಂಟು); ಉಳಿದವು 5 ಮಾತ್ರೆಯ ಗಣಗಳು. ಮೊದಲನೆಯ ಪಾದದಲ್ಲಿ 2ನೆಯ ಗಣವಾದ ಮೇಲೆ ಯತಿ 3ನೆಯ ಗಣದಲ್ಲಿ ದ್ವಿತೀಯಾಕ್ಷರ ಪ್ರಾಸದ ಆವೃತ್ತಿ (ಒಳಪ್ರಾಸ). 6-10ನೆಯ ಗಣಸ್ಥಾನಗಳಲ್ಲಿ 4 ಅಥವಾ 5 ಮಾತ್ರೆಗಳ ಗಣಗಳು ಬರುವುದೂ ಉಂಟು. ಅಂಶತ್ರಿಪದಿಯ ಉಳಿದ ಲಕ್ಷಣಗಳು ಎಷ್ಟರಮಟ್ಟಿಗೆ ಅನ್ವಯಿಸುತ್ತವೆಯೆಂದು ಹೇಳುವುದು ಕಷ್ಟ. ಅಂಶ ತ್ರಿಪದಿಯ ಸೌಲಭ್ಯ ಸೊಗಸು ಇವುಗಳಲ್ಲಿ ಅಷ್ಟರಮಟ್ಟಿಗಿರುವುದಿಲ್ಲ.[೧]
ಸಾಮಾನ್ಯ ಲಕ್ಷಣಕ್ಕೆ ಒಪ್ಪುವ ಒಂದು ಉದಾಹರಣೆ: ಆರುಮುಖ | ಮುತ್ತನ್ನು | ನೀರೊಳಗೆ| ಇರಿಸಲಿಕೆ| ನೀರಳಿದು | ಮುತ್ತು | ಉಳಿಯಿತ್ತು | ಆಮುತ್ತ| ಸೆರಿಸೀವೆ | ಎನ್ನ | ಉರದಲ್ಲಿ | (ಅಕ್ಕಮಹದೇವಿಯ ಯೋಗಾಂಗತ್ರಿವಿಧಿ)
ಏಳೆ
ಬದಲಾಯಿಸಿಇದರ ಲಕ್ಷಣವನ್ನು ನಾಗವರ್ಮನೂ ಜಯಕೀರ್ತಿ ಶಾಙರ್ಗ್‌ದೇವರೂ ಹೇಳಿದ್ದಾರೆ. ಸಾಮಾನ್ಯಲಕ್ಷಣ: 2 ಪಾದಗಳು : ಅವುಗಳಲ್ಲಿ ಕ್ರಮವಾಗಿ 4.3 ಹೀಗೆ 7 ಗಣಗಳು. ಇವುಗಳಲ್ಲಿ 6ನೆಯದು ಬ್ರಹ್ಮ, ಉಳಿದವು ವಿಷ್ಣು; ಮೊದಲನೆಯ ಪಾದದಲ್ಲಿ 2ನೆಯ ಗಣವಾದ ಮೇಲೆ ಯತಿ 3ನೆಯ ಗಣದಲ್ಲಿ ದ್ವಿತೀಯಾಕ್ಷರ ಪ್ರಾಸದ ಆವೃತ್ತಿ (ಒಳಪ್ರಾಸ). ತ್ರಿಪದಿಯ ವಿಷಯದಲ್ಲಿ ನೋಡಿದಂತೆಯೇ ಇಲ್ಲಿಯೂ ವಿಷ್ಣುಗಳ ಸ್ಥಾನದಲ್ಲಿ ಸಾಮಾನ್ಯವಾಗಿ ಬ್ರಹ್ಮವೋ ರುದ್ರವೋ 6ನೆಯ ಬ್ರಹ್ಮದ ಸ್ಥಾನದಲ್ಲಿ ವಿರಳವಾಗಿ ವಿಷ್ಣುವೋ ರುದ್ರವೋ ಬರುವುದು ಸಾಧ್ಯ. ಏಳೆಗೆ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ನಿದರ್ಶನಗಳಿಲ್ಲ. ಜನಪದ ಸಾಹಿತ್ಯದಲ್ಲಿಯೂ ಈಚೆಗೆ ವಿರಳವಾಗಿ ಹೊಸಗನ್ನಡ ಕಾವ್ಯದಲ್ಲಿಯೂ ನಿದರ್ಶನಗಳು ದೊರೆಯುತ್ತವೆ. ಸಾಮಾನ್ಯ ಲಕ್ಷಣಕ್ಕೆ ಒಪ್ಪುವ ಒಂದು ನಿದರ್ಶನ: ಹಡೆದ ತಾ|ಯಿಗೆ ಬನ್ನಿ| ಹಡೆದ ತಂ| ದೆಗೆ ಬನ್ನಿ| ಪಡೆದ ಗಂ|ಡನಿಗೆ ನಮ ಬನ್ನಿ ||
ಚೌಪದಿ
ಬದಲಾಯಿಸಿಇದು ಅಂಶಗಣಾತ್ಮಕ ಮತ್ತು ಮಾತ್ರಾಗಣಾತ್ಮಕ ಎಂಬುದಾಗಿ ಎರಡು ಬಗೆ. ಅಂಶ ಚೌಪದಿಯ ಲಕ್ಷಣ : 4 ಪಾದಗಳು; ಪ್ರತಿಪಾದದಲ್ಲಿ 1ವಿ, 1ರು,-ಹೀಗೆ 2 ಗಣಗಳು. ಚೂಡಾಮಣೀ ಕಾವ್ಯದಲ್ಲಿ ಇದು ಬಳಕೆಯಾಗಿರುವುದಾಗಿ ಜಯಕೀರ್ತಿ ತಿಳಿಸಿದ್ದಾನೆ. ಆ ಕಾವ್ಯ ದೊರೆತಿಲ್ಲ. ಮದನ ತಿಲಕದಲ್ಲಿ ಒಂದು ಪದ್ಯವಿದೆ. ನಿದರ್ಶನಕ್ಕೆ ಒಂದು ಸಾಲು : ರತಿಹೀನಂ | ಪೆಳವಂ ಕುಬ್ಚಂ | (ಮದನತಿಲಕ 8-34). ಮಾತ್ರಾಚೌಪದಿ: 4 ಪಾದಗಳು; 3 ಪಂಚಮಾತ್ರಾಗಣಗಳು, 1 ತ್ರಿಮಾತ್ರಾ ಗಣ-ಹೀಗೆ ಒಟ್ಟು 4 ಗಣಗಳು. ನಡುಗನ್ನಡ ಕಾಲದಲ್ಲಿ ಇದು ಪ್ರಚಲಿತವಾಯಿತು. ಉದಾಹರಣೆಗೆ ಮಾನೌಮಿಯ ಚೌಪದ ಮುಂತಾದವು.
ಛಂದೋವತಂಸ
ಬದಲಾಯಿಸಿಇದರ ಸಾಮಾನ್ಯಲಕ್ಷಣ ನಾಗವರ್ಮನ ಪ್ರಕಾರ 4 ಪಾದಗಳು; ಪ್ರತಿಪಾದದಲ್ಲಿ 3 ವಿ, 1 ಬ್ರ-ಹೀಗೆ 4 ಗಣಗಳು; ಜಯಕೀರ್ತಿಯ ಪ್ರಕಾರ 4 ಪಾದಗಳು, ಪ್ರತಿಪಾದದಲ್ಲಿ 1 ವಿ,4 ಬ್ರ-ಹೀಗೆ 5 ಗಣಗಳು (ಪರ್ಯಾಯ ಗಣಗಳು ಬರುವುದಕ್ಕೆ ಅವಕಾಶವಿದ್ದೇ ಇದೆ). ಈ ವ್ಯತ್ಯಾಸಕ್ಕೆ ಕಾರಣ ಸ್ಪಷ್ಟವಾಗಿ ತಿಳಿಯದು. ಜಯಕೀರ್ತಿ ತಾನು ಲಕ್ಷಣಿಸಿರುವ ಛಂದೋವತಂಸವನ್ನು ಆದಿವರಾಹವೆಂಬುದಾಗಿ ಕರೆದಿರುವುದು ಗಮನಾರ್ಹವಾಗಿದೆ. ಈ ಪದ್ಯ ಜಾತಿಯನ್ನು ಕರ್ಣಾಟಕುಮಾರಸಂಭವ ಮೊದಲಾದ ಕಾವ್ಯಗಳಲ್ಲಿ ಬಳಸಿದೆಯೆಂಬುದಾಗಿ ಆತ ಹೇಳಿದ್ದಾನೆ. ಅವು ಯಾವುವೂ ನಮಗೆ ದೊರೆತಿಲ್ಲ. ಜನಪದ ಸಾಹಿತ್ಯದಲ್ಲಿಯೂ ಹರಿದಾಸರ ಪದಗಳಲ್ಲಿಯೂ ನಾಗವರ್ಮನ ಛಂದೋವತಂಸದ ಲಕ್ಷಣವನ್ನು ಹೋಲುವ ಮಟ್ಟುಗಳುಂಟು. ಆದರೆ ಇವನ್ನು ವಿಶದವಾಗಿ ಪರಿಶೀಲಿಸುವುದು ಅಗತ್ಯ. ನಿದರ್ಶನಕ್ಕೆ ನಾಗವರ್ಮನ ಲಕ್ಷಣ ಪದ್ಯದ ಒಂದು ಸಾಲು:
ಮಂದರ| ಧರಗಣ| ಮೆಸೆದಿರೆ| ಮೊದಲೊಳ್|
ಅಕ್ಕರಿಕೆ
ಬದಲಾಯಿಸಿಇದರ ಸಾಮಾನ್ಯಲಕ್ಷಣ ನಾಗವರ್ಮನ ಪ್ರಕಾರ 4 ಪಾದಗಳು. ಪ್ರತಿಪಾದದಲ್ಲಿ ವಿ, ಬ್ರ, ವಿ, ಬ್ರ, ವಿ,ರು-ಹೀಗೆ 6 ಗಣಗಳು. 6ನೆಯ ಅಕ್ಷರಕ್ಕೆ 2 ಸಾರಿ ಯತಿ, ಜಯಕೀರ್ತಿಯ ಪ್ರಕಾರ; ವಿ, ಬ್ರ, ವಿ, ಬ್ರ, ವಿ, ವಿ, +ಗುರು ಹೀಗೆ ಗಣವಿನ್ಯಾಸ; ಪ್ರತಿಪಾದದಲ್ಲಿಯೂ 26 ಮಾತ್ರೆಗಳಂತೂ ಇರಬೇಕು: 4 ಪಾದಗಳಲ್ಲಿ ಒಟ್ಟುಮಾತ್ರಾಸಂಖ್ಯೆ 104; 8-8 ಮಾತ್ರೆಗಳಿಗೊಮ್ಮೆ 2 ಸಾರಿಯತಿ. ಅಥವಾ ಅಂಶಗಣದ ಬದಲು ಜಗಣವಲ್ಲದ 6 ಚತುರ್ಮಾತ್ರಾಗಣಗಳು+ಗುರು ಕೂಡ ಬರಬಹುದು. ಈ ನಿರೂಪಣೆ ಪರಸ್ಪರವಾಗಿ ಭಿನ್ನವೆಂದು ತೋರಿದರೂ ಲಕ್ಷಣ ಒಟ್ಟಿನಲ್ಲಿ ಒಂದೇ. ಇದು ಅಂಶವೃತ್ತವಾದರೂ ಮಾತ್ರವೃತ್ತವಾಗಿ ಪರಿಣಮಿಸಿದೆ. ಷಡಕ್ಷರಿಯ ರಾಜಶೇಖರವಿಳಾಸದಲ್ಲಿ ಒಂದು ಪದ್ಯವಿದೆ. ನಿದರ್ಶನಕ್ಕೆ ಒಂದು ಸಾಲು: ಸುರನುತ | ಚರಣೇ| ವರಗುಣ|ಭರಣೇ|ಖರರುಚಿ | ಬಿಂಬಗತೇ| (ರಾಜಶೇಖರವಿಲಾಸ)
ಮದನವತಿ
ಬದಲಾಯಿಸಿಇದರ ಸಾಮಾನ್ಯಲಕ್ಷಣ ನಾಗವರ್ಮನ ಪ್ರಕಾರ 3 ರೀತಿಯಾಗಿ ಇರುವಂತೆ ತೋರುತ್ತದೆ : 4 ಪಾದಗಳು; ಪ್ರತಿಪಾದದಲ್ಲಿ 5ವಿ + 1 ಗುರು ಅಥವಾ 4ವಿ + 1ರು ಅಥವಾ 3ರು + 1ವಿ. ಇವುಗಳಲ್ಲಿ ಮೊದಲನೆಯ ಎರಡರ ನಡುವೆ ವಾಸ್ತವವಾಗಿ ಭೇದವೇನಿಲ್ಲ. ಅವೆರಡೂ ಪುರ್ತಿಪದ್ಯಕ್ಕೆ ಹೊಂದುತ್ತದೆ; ಕೊನೆಯದು ಹೊಂದುವುದಿಲ್ಲ. ಆತನ ಲಕ್ಷಣಪದ್ಯದಲ್ಲಿ ಚತುರ್ಮಾತ್ರಕವಾದ (ವಿಷ್ಣು)ಗಣಗಳ ವಿನ್ಯಾಸವೇ ಸ್ಪಷ್ಟವಾಗಿ ಕೇಳಿಸುವುದರಿಂದ ಆತನ ಪದ್ಯದ ಮಟ್ಟಿಗೆ 5ವಿ + 1ಗುರು ಎಂದಿಟ್ಟುಕೊಳ್ಳಬಹುದು, ಜಯಕೀರ್ತಿ ಮೊದಲ ಸಾಲಿಗೆ 20 ಲಘು+1 ಗುರು; ಉಳಿದ ಸಾಲುಗಳಲ್ಲಿ 4ವಿ+1ಬ್ರ; ಒಟ್ಟಿನಲ್ಲಿ ಪ್ರತಿಪಾದದಲ್ಲಿಯೂ 22 ಮಾತ್ರೆಗಳು ಯತಿಯೊಡಗೂಡಿ ಬಂದಿರಬೇಕು-ಎಂದಿದ್ದಾನೆ, ಆತನ ವಿವರಣೆಯಲ್ಲಿ ಅಂಶ ಮತ್ತು ಮಾತ್ರಾಗಣಗಳ ಸಮ್ಮಿಶ್ರ ನಿರೂಪಣೆಯಲ್ಲಿ ಬಂದಿರುವುದಕ್ಕೆ ಕಾರಣ ಇದು ಕೂಡ ಅಂಶವೃತ್ತವಾಗಿಯೂ ಧಾಟಿಯಲ್ಲಿ ಮಾತ್ರಾ ವೃತ್ತವಾಗಿ ಪರಿಣಮಿಸಿರುವುದೇ ಆಗಿದೆ. ಆದರೆ ಲಕ್ಷಣ ನಿರೂಪಣೆಯಲ್ಲಿ ಮಾತ್ರಾ ಸಾಮ್ಯವನೊಪ್ಪಿಯೂ ಗಣವಿನ್ಯಾಸವನ್ನು ಬೇರೆಯಾಗಿ ಹೇಳಿರುವುದಕ್ಕೆ ಕಾರಣವೇನೋ ತಿಳಿಯದು. ಪ್ರಾಚೀನ ಸಾಹಿತ್ಯದಲ್ಲಿ ಇದು ಎಲ್ಲಿ ಬಳಕೆಯಾಗಿದೆ ಯೆಂಬುದು ಗೊತ್ತಾಗಿಲ್ಲ. ನಿದರ್ಶನಕ್ಕೆ ನಾಗವರ್ಮನ ಲಕ್ಷಣ ಪದ್ಯದ ಒಂದು ಸಾಲು: ಮದನನ| ತಂದೆಯ| ಗಣಮವು| ವಿಷಯದೊ|ಳಿರೆ ಗುರು|ಮುಂ
ಗೀತಿಕೆ
ಬದಲಾಯಿಸಿನಾಗವರ್ಮ ಜಯಕೀರ್ತಿಗಳು ಹೇಳಿರುವ ಇದರ ಲಕ್ಷಣಾಂಶಗಳನ್ನು ಸಮನ್ವಯ ಮಾಡಿ ಸಾಮಾನ್ಯಲಕ್ಷಣವನ್ನು ಹೀಗೆ ಹೇಳಬಹುದು: ನಾಲ್ಕು ಪಾದಗಳು; 2-2 ಪಾದಗಳಿಗೆ 2 ಅರ್ಧಗಳು; ಪುರ್ವಾರ್ಧ 1 ಮತ್ತು 2ನೆಯ ಪಾದಗಳಲ್ಲಿ ಕ್ರಮವಾಗಿ 3 ಮತ್ತು 4 ಗಣಗಳು ಬರುವಂತೆ ಒಟ್ಟು 7 ಗಣಗಳು. ಇವುಗಳಲ್ಲಿ 2,6ನೆಯವು ಬ್ರಹ್ಮ, ಉಳಿದವು ವಿಷ್ಣು ಅಥವಾ ರುದ್ರ. ಉತ್ತರಾರ್ಧದ 3 ಮತ್ತು 4ನೆಯ ಪಾದಗಳಲ್ಲಿಯೂ ಹೀಗೆಯೇ. ಪ್ರಭುಸೇನನ ಅನುಯಾಯಿಗಳು (?) ಅಲಂಕಾರದಲ್ಲಿ ಗೀತಿಕೆಯನ್ನು ವರ್ಣಿಸಿರುವುದಾಗಿ ಜಯಕೀರ್ತಿ ಹೇಳಿದ್ದಾನೆ. ಆದರೆ ಆ ಗ್ರಂಥ ಯಾವುದೆಂಬುದು ನಮಗೆ ಸರಿಯಾಗಿ ತಿಳಿಯದು. ಕವಿರಾಜಮಾರ್ಗದಲ್ಲಿ ಈ ಗೀತಿಕೆಯನ್ನು ಹೋಲುವ ಹಲವು ಪದ್ಯಗಳಿವೆ. ಆದರೆ ಅವು ನಾಗವರ್ಮ, ಜಯಕೀರ್ತಿಗಳು ಹೇಳಿರುವ ಲಕ್ಷಣಕ್ಕೆ ಸಮರ್ಪಕವಾಗಿ ಹೊಂದಿಕೊಳ್ಳುವುದಿಲ್ಲ. ನಿದರ್ಶನಕ್ಕೆ ನಾಗವರ್ಮನ ಲಕ್ಷಣಪದ್ಯದ ಎರಡು ಸಾಲು : ಎರಡ¾õೆÆಳಾ| ¾õೆಂಬ| ಸಂಖ್ಯೆಯೊಳ್ ಬರೆ ಪದ್ಮ | ಭವನು¾õೆದುವು ಮ | ಚ್ಚುವ ತೆ¾ದಿಂ|
ಉತ್ಸಾಹ
ಬದಲಾಯಿಸಿನಾಗವರ್ಮನ ಪ್ರಕಾರ ಇದರ ಸಾಮಾನ್ಯ ಲಕ್ಷಣ; 4 ಪಾದಗಳು, ಪ್ರತಿ ಪಾದದಲ್ಲಿ 7 ಬ್ರ + 1ಗುರು. ಕೊನೆಯ ಗುರು ಲಯಗ್ರಾಹಿಯಾಗಿ ಮುನ್ನಡೆಯುತ್ತದೆ. ಪದ್ಯದಲ್ಲಿ ಎದ್ದುತೋರುವ ಮಾತ್ರಾಲಯದ ಧಾಟಿಯೇ ಕಂಡುಬರುತ್ತಿರುವುದರಿಂದ, ಅಕ್ಕರಿಕೆ ಮದನವತಿಗಳ ಹಾಗೆಯೇ ಇದೂ ಮಾತ್ರಾ ವೃತ್ತವಾಗಿ ಪರಿಣಮಿಸಿದೆಯೆಂದು ಹೇಳಬಹುದು. ಉತ್ಸಾಹಪುರ್ಣವಾದ ಲಯಗತಿಗೆ ಅನುಸಾರವಾಗಿ ವೃತ್ತದ ಹೆಸರು ಉತ್ಸಾಹ ಎಂದಿರುವುದು ಉಚಿತವೇ ಆಗಿದೆ. ಜಯಕೀರ್ತಿ ಈ ಪದ್ಯಜಾತಿಯನ್ನು ಮಿಶ್ರಾಧಿಕಾರದಲ್ಲಿ ಸೇರಿಸಿ ಮಾತ್ರಾ ವೃತ್ತವೆನ್ನುವಂತೆ ಹೀಗೆ ಲಕ್ಷಣವನ್ನು ಹೇಳಿದ್ದಾನೆ: 7 ಗುರುಲಘುಗಳ ಜೋಡಿ + 1 ಗುರು. ಯಾವುದೇ ಗುರು ಲಘುವಿನ ಜೋಡಿಯ ಸ್ಥಾನದಲ್ಲಿ ನಗಣ (ಎಂದರೆ 3 ಲಘುಗಳು) ಕೂಡ ಬರಬಹುದು. ನಾಗವರ್ಮನ ಲಕ್ಷಣಪದ್ಯದಲ್ಲಿಯ ಮಾತ್ರಾ ಗತಿಯನ್ನು ನೋಡಿಯೇ ಜಯಕೀರ್ತಿ ಹೀಗೇ ಮಾತ್ರಾತ್ತವನ್ನಾಗಿ ಹೇಳಿದ್ದಾನೆಂದು ಊಹಿಸಬಹುದು. ಅಗ್ಗಳನ ಚಂದ್ರಪ್ರಭಪುರಾಣದಲ್ಲಿ (ಪ್ರ.ಶ. 1189) ಇದು ಬಂದಿದೆ. ಆದರೆ ಇದಕ್ಕೂ ಮೊದಲಲ್ಲಿ, ಜಯಸಿಂಹನ ತಲಂಗೆರೆ ಶಾಸನದಲ್ಲಿಯೂ (ಸು. 10ನೆಯ.ಶ.) ಒಂದು ನಿದರ್ಶನವಿದೆ. ಅದರ ಒಂದು ಸಾಲು : ಊರ| ಕಡೆಯ| ತೊರೆಯ| ತಡಿಯ| ಕರೆಯ| ಕಲ್ಲ| ಮೋಙ| ದಿಮ್ (ಎಂ.ಇಂ. 29-ಪು. 205-6) (ಈ ಪದ್ಯದ 2ನೆಯ ಪಾದದ 1ನೆಯದು ವಿಷ್ಣುಗಣವಾಗಿದೆ).
ಷಟ್ಟದಿ
ಬದಲಾಯಿಸಿಅಚ್ಚಕನ್ನಡ ಛಂದಸ್ಸಿನ ಮಟ್ಟುಗಳಲ್ಲಿ ಷಟ್ಟದಿ (ನೋಡಿ- ಷಟ್ಪದಿ) ತ್ರಿಪದಿಯಂತೆಯೇ ಗಮನಾರ್ಹವಾದುದು. ಮೊದಲಲ್ಲಿ ಅಂಶಗಣಗಳಿಂದ ಕಟ್ಟಿದ ಒಂದು ಬಗೆಯ ಷಟ್ಟದಿ ಕಾಣಿಸಿಕೊಂಡಿತು. ಅನಂತರದಲ್ಲಿ ಸು. 12-13ನೆಯ ಶತಮಾನದಿಂದೀಚೆಗೆ ಮಾತ್ರಾ ಗಣಗಳಿಂದ ಕಟ್ಟಿದ ಆರು ಬಗೆಯ ಷಟ್ಟದಿಗಳು ಮುಖ್ಯವಾಗಿ ಕಾಣಿಸಿಕೊಂಡು ಪ್ರಬಲಿಸಿ ಪ್ರಸಿದ್ಧಿಗೆ ಬಂದುವು. ಆಗ ಮೊದಲನೆಯದು ಬಲು ಮಟ್ಟಿಗೆ ಕಣ್ಮರೆಯಾಯಿತು. ಷಟ್ಟದಿ ಸಾಹಿತ್ಯದ ಇತಿಹಾಸವನ್ನು ಪರಿಶೀಲಿಸಿದರೆ ಇದು ತಿಳಿಯುತ್ತದೆ.
ಅಂಶಗಣಾತ್ಮಕ ಷಟ್ಟದಿ
ಬದಲಾಯಿಸಿನಾಗವರ್ಮನೂ ಜಯಕೀರ್ತಿ, ಸೋಮೇಶ್ವರ ಮತ್ತು ಶಾಙರ್ಗ್‌ದೇವ ಈ ಮೂವರು ಇದರ ಲಕ್ಷಣವನ್ನು ಸಮಾನವಾಗಿ ಹೇಳಿದ್ದಾರೆ. ಲಕ್ಷಣ-ಲಕ್ಷ್ಯಗಳನ್ನು ಸಮನ್ವಯಿಸಿಕೊಂಡು ಸಾಮಾನ್ಯಲಕ್ಷಣವನ್ನು ಹೀಗೆ ಹೇಳಬಹುದು. 3-3 ಪಾದಗಳ 2 ಸಮಾರ್ಧಗಳನ್ನುಳ್ಳ 6 ಪಾದಗಳು; ಪುರ್ವಾರ್ಧದಲ್ಲಿ 1, 2 ಮತ್ತು 3ನೆಯ ಪಾದಗಳಲ್ಲಿ ಕ್ರಮವಾಗಿ 2ವಿ, 2ವಿ ಮತ್ತು 2ವಿ+1ರು-ಹೀಗೆ ಬರುವಂತೆ 7 ಗಣಗಳು (ವಿ+ವಿ| ವಿ+ವಿ| ವಿ+ವಿ+ರು); ಉತ್ತರಾರ್ಧದಲ್ಲಿಯೂ ಹೀಗೆಯೇ. ವಿಷ್ಣು ಮತ್ತು ರುದ್ರಗಣಗಳ ಸ್ಥಾನಗಳಲ್ಲಿ ವಿರಳವಾಗಿ ಪರ್ಯಾಯ ಗಣಗಳು ಬರುವುದುಂಟು.
ಸೋಮೇಶ್ವರನ ಮಾನಸೋಲ್ಲಾಸದಲ್ಲಿ ಈ ಷಟ್ಟದಿ ಕನ್ನಡಭಾಷೆಗೆ ಸೇರಿದ್ದೆಂದೂ ಆ ಭಾಷೆಯಲ್ಲಿ ಅದು ಹಾಡತಕ್ಕದ್ದೆಂದೂ ಈ ಕಥೆಯನ್ನು ಅದು ಒಳಗೊಂಡಿರುತ್ತದೆಂದೂ ಮುಂತಾಗಿ ಕೆಲವು ಸಂಗತಿಗಳನ್ನು ಹೇಳಿದೆ. ಸು. 12ನೆಯ ಶತಮಾನದ ಆದಿಭಾಗದಲ್ಲಿಯೇ (1126-39) ಷಟ್ಪದಿನಿಬದ್ಧವಾದ ಕಾವ್ಯಗಳು ಹುಟ್ಟಿದ್ದವೆಂದು ತಿಳಿಯುವುದಕ್ಕೆ ಈ ಗ್ರಂಥದಲ್ಲಿ ಕೆಲವು ಸೂಚನೆಗಳಿವೆ. ಆದರೆ ಅಂಥ ಕಾವ್ಯಗಳಾವುವೂ ದೊರೆತಿಲ್ಲ. ಇಂಥ ಷಟ್ಪದಿಗಳು ಈವರೆಗೆ ಕೆಲವೇ ದೊರೆತಿವೆ. ಚಂದ್ರರಾಜನ ಮದನ ತಿಲಕ (ಪ್ರ.ಶ. ಸು. 1030), ಶಾಂತಿನಾಥನ (ಪ್ರ.ಶ. 1068) ಸುಕುಮಾರಚರಿತ್ರೆ, ಇವುಗಳಲ್ಲಿ ಒಂದೊಂದು, ಮಾನಸೋಲ್ಲಾಸದಲ್ಲಿಯ ಲಕ್ಷ್ಯ ಪದ್ಯವೊಂದು-ಈ ಮೂರನ್ನು ಬಿಟ್ಟರೆ ಉಳಿದವೆಲ್ಲ ಶಾಸನಗಳಲ್ಲಿ ಕಾಣಿಸಿಕೊಂಡಿರತಕ್ಕವಾಗಿದೆ. ಅವು ಚಿತ್ರದುರ್ಗದ 47ನೆಯ ಶಾಸನ (1067), ಬಿಜಾಪುರಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣದ ಶಾಸನ (1067), ಅಮ್ಮಿನ ಭಾವಿನ ಶಾಸನ (1071), ಮತ್ತು ಮೆಹಬೂಬ್ನಗರ ಜಿಲ್ಲೆಯ ಗಂಗಾಪುರದ ಶಾಸನ (ಸು. 1,100-40). ನಿದರ್ಶನಕ್ಕೆ ಕಾವ್ಯದಿಂದ ಒಂದು ಪುರ್ವಾರ್ಧ :
ಅದು ಪರ | ಮಾಸ್ಪದ | ಮದು ಪುಣ್ಯ | ಸಂಪದ | ಮದು ಮಹಾ | ಭ್ಯುದಯ ವಿ | ಲಾಸಾವಾಸಂ || (ಸುಕುಮಾರಚರಿತ...)
ಮಾತ್ರಾಗಣಾತ್ಮಕ ಷಟ್ಪದಿಗಳು
ಬದಲಾಯಿಸಿಇವು ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ ಮತ್ತು ವಾರ್ಧಕ-ಎಂಬುದಾಗಿ 6 ಬಗೆಯವು. ಇವುಗಳ ಜೊತೆಗೆ ಉದ್ದಂಡ ಎಂಬೊಂದು ಬಗೆ ಕೂಡ ಉಂಟು. ಮೊದಲು ಅಂಶ-ಷಟ್ಪದಿಗೆ ಸಮೀಪವಾದ ಶರ, ಕುಸಮಷಟ್ಪದಿಗಳೂ ಆಮೇಲೆ ಷಟ್ಪದಿಯ ಮೂಲ ಚೌಕಟ್ಟಿಗೆ ಹೊಂದುವಂತೆ 2-2 ಮಾತ್ರೆಗಳ ಪ್ರಮಾಣವನ್ನು ವರ್ಧಿಸುವುದರ ಮೂಲಕವಾಗಿ ಭೋಗದಿಂದ ವಾರ್ಧಕದವರೆಗೆ ಉಳಿದ ಪ್ರಭೇದಗಳೂ ಹುಟ್ಟಿಕೊಂಡಿರಬೇಕೆಂದು ತೋರುತ್ತದೆ. ಇನ್ನು ಉದ್ದಂಡ ಎಂಬುದು ಒಟ್ಟಿನಲ್ಲಿ ವಾರ್ಧಕವನ್ನೇ ಹೋಲುವ ಒಂದು ಬಗೆ. ಈ ಎಲ್ಲ ಬಗೆಗಳಲ್ಲಿಯೂ ಸ್ವತಂತ್ರವಾಗಿ ಕೃತಿರಚನೆಯಾಗಿವೆ. ರಾಘವಾಂಕ, ಚಾಮರಸ, ಕುಮಾರವ್ಯಾಸ, ಲಕ್ಷ್ಮೀಶ-ಮುಂತಾದವರು ಷಟ್ಪದಿಗಳಲ್ಲಿ ರಚಿಸಿರುವ ಕಾವ್ಯಗಳು ಪ್ರಸಿದ್ಧವಾಗಿವೆ.
ಶರ ಷಟ್ಪದಿ
ಬದಲಾಯಿಸಿಪುರ್ವಾರ್ಧದಲ್ಲಿ 1, 2 ಮತ್ತು 3ನೆಯ ಪಾದಗಳಲ್ಲಿ ಕ್ರಮವಾಗಿ ಚತುರ್ಮಾತ್ರಾ ಗಣಗಳು 2, 2 ಮತ್ತು 3 + 1 ಗುರು; ಉತ್ತರಾರ್ಧದಲ್ಲಿಯೂ ಹೀಗೆಯೇ. ನಿದರ್ಶನಕ್ಕೆ ಪುರ್ವಾರ್ಧ : ಈಶನ | ಕರುಣೆಯ ನಾಶಿಸು | ವಿನಯದಿ | ದಾಸನ | ಹಾಗೆಯೇ | ನೀ ಮನ | ವೇ || (ಪದ್ಯಸಾರ)
ಕುಸುಮ ಷಟ್ಪದಿ
ಬದಲಾಯಿಸಿಪುವಾರ್ಧದಲ್ಲಿ 1, 2, ಮತ್ತು 3ನೆಯ ಪಾದಗಳಲ್ಲಿ ಕ್ರಮವಾಗಿ ಪಂಚಮಾತ್ರಾ ಗಣಗಳು. 2, 2, ಮತ್ತು 3 + 1 ಗುರು ; ಉತ್ತರಾರ್ಧದಲ್ಲಿಯೂ ಹೀಗೆಯೇ ನಿದರ್ಶನಕ್ಕೆ ಪುವಾರ್ಧ : ನಾಡು ಮನ | ಸಿಜ ನೊಲವಿ | ನಾಡುವೆಡೆ | ಸಂತತಂ | ಬೀಡು ರತಿ | ಪತಿಗೆ ಸತ | ತನಿಧಾನ | ವು (ಕುಮುದೇಂದು ರಾಮಾಯಣ)
ಭೋಗ : ಷಟ್ಪದಿ
ಬದಲಾಯಿಸಿಪುರ್ವಾರ್ಧದಲ್ಲಿ 1, 2 ಮತ್ತು 3ನೆಯ ಪಾದಗಳಲ್ಲಿ ಕ್ರಮವಾಗಿ ತ್ರಿಮಾತ್ರಾಗಣಗಳು 4, 4 ಮತ್ತು 6 + 1 ಗುರು ; ಉತ್ತರಾರ್ಧದಲ್ಲಿಯೂ ಹೀಗೆಯೇ. ನಿದರ್ಶನಕ್ಕೆ ಪುರ್ವಾರ್ಧ : ಮೆರೆಯು | ತಿದ್ದ | ಭಾಗ್ಯ | ವೆಲ್ಲ ಹರಿದು | ಹೋಯಿ | ತೆನುತ | ತಿರುಕ | ಮರಳಿ | ನಾಚಿ | ಪೋಗು | ತಿದ್ದ | ಮರುಳ | ನಂತೆಯೇ (ಮುಪ್ಪಿನ ಷಡಕ್ಷರಿ)
ಭಾಮಿನಿ ಷಟ್ಪದಿ
ಬದಲಾಯಿಸಿಪುರ್ವಾರ್ಧದಲ್ಲಿ 1, 2, ಮತ್ತು 3ನೆಯ ಪಾದಗಳಲ್ಲಿ ಕ್ರಮವಾಗಿ 3, 4ರ ಹಾಗೆ ಬರುವ ಗಣಗಳು 2, 2 ಮತ್ತು 3 + 1 ಗುರು ; ಉತ್ತರಾರ್ಧದಲ್ಲಿಯೂ ಹೀಗೆಯೇ. ನಿದರ್ಶನಕ್ಕೆ ಪುರ್ವಾರ್ಧ : ವೀರ | ನಾರಾ | ಯಣನೆ | ಕವಿ ಲಿಪಿ | ಕಾರ | ಕುವರ | ವ್ಯಾಸ | ಕೇಳುವ | ಸೂರಿ | ಗಳು ಸನ | ಕಾದಿ | ಗಳು ಜಂ | ಗಮಜ | ನಾರ್ದನ | ರು || (ಕುಮಾರವ್ಯಾಸ ಭಾರತ)
ಪರಿವರ್ಧಿನಿ ಷಟ್ಪದಿ
ಬದಲಾಯಿಸಿಪುರ್ವಾರ್ಧದಲ್ಲಿ 1, 2, ಮತ್ತು 3ನೆಯ ಪಾದಗಳಲ್ಲಿ ಕ್ರಮವಾಗಿ ಚತುರ್ಮಾತ್ರಾಗಣಗಳು 4, 4 ಮತ್ತು 6 + 1 ಗುರು ; ಉತ್ತರಾರ್ಧದಲ್ಲಿಯೂ ಹೀಗೆಯೇ. ನಿದರ್ಶನಕ್ಕೆ ಪುರ್ವಾರ್ಧ : ದುರಿತವ | ನಂ ಬೆಳೆ | ವುದಕೆ ಪೊ | ಲಂ ಕೊಲೆ | ಪರಕಲಿ | ಸಿದ ನವ | ದೋಹಳ | ಮನೃತಂ ಪರಿಕಾ | ಲುದುಕಮ | ದಕೆ ಕಳ | ವನ್ಯ | ಸ್ತ್ರೀ ಸಂ | ಗಮೆ ಗೆ | ಯ್ಮೆ || (ಜಯನೃಪಕಾವ್ಯ)
ವಾರ್ಧಕ ಷಟ್ಪದಿ
ಬದಲಾಯಿಸಿಪುರ್ವಾರ್ಧದಲ್ಲಿ 1, 2, ಮತ್ತು 3ನೆಯ ಪಾದಗಳಲ್ಲಿ ಕ್ರಮವಾಗಿ ಪಂಚಮಾತ್ರಾ ಗಣಗಳು 4, 4 ಮತ್ತು 6 + 1 ಗುರು ; ಉತ್ತರಾರ್ಧದಲ್ಲಿಯೂ ಹೀಗೆಯೇ. ನಿದರ್ಶನಕ್ಕೆ ಪುರ್ವಾರ್ಧ : ಶ್ರೀವಧುವಿ | ನಂಬಕ ಚ | ಕೋರಕಂ | ಪೊರೆಯ ಭ | ಕ್ತಾವಳಿಯ | ಹೃತ್ಕುಮುದ | ಕೋರಕಂ | ಬಿರಿಯೆ ಜಗ | ತೀವಳಿಯ | ದಮಲ ಸೌ | ಭಾಗ್ಯ ರ | ತ್ನಾಕರಂ | ಪೆರ್ಚಿನಿಂ | ಮೇರೆವರಿ | ಯೆ || (ಜೈಮಿನಿ ಭಾರತ)
ಉದ್ದಂಡ ಷಟ್ಪದಿ
ಬದಲಾಯಿಸಿಪುರ್ವಾರ್ಧದಲ್ಲಿ 1, 2, ಮತ್ತು 3ನೆಯ ಪಾದಗಳಲ್ಲಿ ಕ್ರಮವಾಗಿ ಚತುರ್ಮಾತ್ರಾಗಣಗಳು 5, 5 ಮತ್ತು 8 ; ಉತ್ತರಾರ್ಧದಲ್ಲಿಯೂ ಹೀಗೆಯೇ. ನಿದರ್ಶನಕ್ಕೆ ಪುರ್ವಾರ್ಧ :
ಪರಿಕಿಪೊಡೀಕೃತಿ | ಗಾವುದು | ಮೊದಲೆನೆ | ಹಳಚುವ | ತೆರೆಯೊಳು | ತಿರುಗುವ | ಕರಿಮಕ | ರಂಗಳ | ಪುಚ್ಛೋ | ತ್ಕರಹತಿ | ಯಿಂ ಚೆ | ಲ್ಲಿದ ಮಣಿ | ಗಳ ಬೆಳ | ಗಿಂ ಶ್ವೇ | ತದ್ವೀ | ಪವನಣ | ಕಿಸುತ ||
ಈ ಮೇಲೆ ವಿವರಿಸಿದ ಷಟ್ಪದಿಭೇದಗಳಲ್ಲಿ ಗಮಿನಿಸತಕ್ಕ ಕೆಲವು ಸಾಮಾನ್ಯ ಸಂಗತಿಗಳೆಂದರೆ ಇವು. ಆದಿಪ್ರಸವಿರತಕ್ಕದ್ದು ; U- ಎಂಬ ರೀತಿಯ ಗಣ ಬರತಕ್ಕದ್ದಲ್ಲ; 3-6ನೆಯ ಪಾದಾಂತ್ಯದಲ್ಲಿ ಲಘುವಿದ್ದಾಗ ಎಣಿಕೆಗೆ ಗುರುವೆಂದಿಟ್ಟುಕೊಳ್ಳಬೇಕು.
ಸಾಂಗತ್ಯ
ಬದಲಾಯಿಸಿಅಚ್ಚಕನ್ನಡ ಛಂದಸ್ಸಿನ ಚರಿತ್ರೆಯಲ್ಲಿ ಸು. 14-15ನೆಯ ಶತಮಾನಗಳಲ್ಲಿ ರೂಪಗೊಂಡ ಮಟ್ಟು ಇದು. (ನೋಡಿ- ಸಾಂಗತ್ಯ) ಅಲ್ಲಿಂದೀಚೆಗೆ ಕನ್ನಡಕವಿಗಳು ಈ ಛಂದಸ್ಸಿನಲ್ಲಿ ವಿಪುಲವಾಗಿ ಕೃತಿರಚನೆ ಮಾಡಿದ್ದಾರೆ. ರತ್ನಾಕರ ವರ್ಣಿ, ನಂಜುಂಡಕವಿ ಮೊದಲಾದವರು ರಚಿಸಿರುವ ಪ್ರಸಿದ್ಧ ಕಾವ್ಯಗಳು ಈ ಛಂದಸ್ಸಿನಲ್ಲಿಯೇ ಇವೆ. ಇದರ ಬೆಳೆವಣಿಗೆಯಲ್ಲಿ ಎರಡು ಮುಖ್ಯವಾದ ಘಟ್ಟಗಳಿವೆ. ಸು. 1410ರಲ್ಲಿದ್ದ ದೇಪರಾಜನ ಸೊಬಗಿನ ಸೋನೆ ಮತ್ತು ಈಚೆಗೆ ಸೊಬಗಿನ ಸೋನೆ ಎಂಬ ಮಾತಿನ ಜೊತೆಗೆ ಸೇರಿಕೊಂಡು ಬಂದಿರುವ ತತ್ತ್ವದ ಸೊಬಗಿನ ಸೋನೆ, ಮದನ ಮೋಹಿನೀ ಕಥೆ, ಸೊಬಗಿನ ಸೋನೆ ವರ್ಣ-ಇಂಥ ಕೆಲವು ಕೃತಿಗಳಲ್ಲಿ ತೋರುವ ಲಕ್ಷಣ ಒಂದು ರೀತಿಯಾಗಿಯೂ ರತ್ನಾಕರವರ್ಣಿಯ ಭರತೇಶ ವೈಭವ, ಹೊನ್ನಮ್ಮನ ಹದಿಬದೆಯಧರ್ಮ ಇಂಥ ಕೃತಿಗಳಲ್ಲಿ ತೋರುವ ಲಕ್ಷಣ ಇನ್ನೊಂದು ರೀತಿಯಾಗಿಯೂ ಇದೆ. ಸೊಬಗಿನ ಸೋನೆಯ ಧಾಟಿಯ ಛಂದಸ್ಸನ್ನು ಸಾಮಾನ್ಯವಾಗಿ ಸಾಂಗತ್ಯವೆಂದೇ ತಿಳಿಯಲಾಗಿದೆ. ಆದರೆ ಅದನ್ನು ಸೊಬಗಿನ ಸೋನೆಯ ಛಂದಸ್ಸು (ವರ್ಣ) ಎಂದು ಬೇರೆಯಾಗಿಟ್ಟು ಕೊಳ್ಳುವುದೇ ಸೂಕ್ತ. ಹಿಂದೆಯೇ ಇದನ್ನು ಸೊಬಗಿನ ಸೋನೆಯ ವರ್ಣ ಎಂದು ಪ್ರತ್ಯೇಕವಾಗಿ ಕರೆದಿರುವುದುಂಟು. ಮುಂದೆ ಇದರಲ್ಲಿ ಮಾರ್ಪಾಟು ತಲೆದೋರಿ ಸ್ಪಷ್ಟರೂಪಕ್ಕೆ ಬಂದು ಸಾಂಗತ್ಯವಾಗಿರಬಹುದೆಂದೂ ಊಹಿಸಬಹುದು. ಸೊಬಗಿನ ಸೋನೆಯ ಛಂದಸ್ಸಿನ ಸಾಮಾನ್ಯಲಕ್ಷಣ : ಎರಡು ಸಮಾರ್ಧಗಳನ್ನುಳ್ಳ 4 ಪಾದಗಳು. ಪುರ್ವಾರ್ಧದ 1, 2ನೆಯ ಪಾದಗಳಲ್ಲಿ ಕ್ರಮವಾಗಿ 4 ಮತ್ತು 3 ವಿಷ್ಣು ಗಣಗಳು ; ಉತ್ತರಾರ್ಧದಲ್ಲಿಯೂ ಹೀಗೆಯೇ. ವಿಷ್ಣುಗಳಿಗೆ ಪರ್ಯಾಯವಾಗಿ ಬ್ರಹ್ಮವೋ ರುದ್ರವೋ ಬರಬಹುದು. ನಿದರ್ಶನಕ್ಕೆ ಪುರ್ವಾರ್ಧ :
ಎಲೆ ಪ್ರಿಯೆ | ಕೇಳು ತೊ | ಳದ ಮುತ್ತು | ಕರತಳಾ ಮಳಕವೀ | ಕಥೆ ಸೊಬ | ಗಿನ ಸೋನೆ || (ಸೊಬಗಿನ ಸೋನೆ, 1-21)
ಸಾಂಗತ್ಯಛಂದಸ್ಸಿನ ಸಾಮಾನ್ಯ ಲಕ್ಷಣ : ಎರಡು ಸಮಾರ್ಧಗಳನ್ನುಳ್ಳ 4 ಪಾದಗಳು: ಪುರ್ವಾರ್ಧದ 1, 2ನೆಯ ಪಾದಗಳಲ್ಲಿ ಕ್ರಮವಾಗಿ 4 ವಿ. ಮತ್ತು 2ವಿ + 1 ಬ್ರ ; ಉತ್ತರಾರ್ಧದಲ್ಲಿಯೂ ಹೀಗೆಯೇ. ಆದರೆ ವಿಷ್ಣು ಮತ್ತು ಬ್ರಹ್ಮಗಳ ಸ್ಥಾನದಲ್ಲಿ ಪರ್ಯಾಯಗಣಗಳು ಬರಬಹುದು. ನಿದರ್ಶನಕ್ಕೆ ಪುರ್ವಾರ್ಧ : ಪರಮ ಪ | ರಂಜ್ಯೋತಿ | ಕೋಟಿ ಚಂ | ದ್ರಾದಿತ್ಯ ಕಿರಣ ಸು | ಜ್ಞಾನ ಪ್ರ | ಕಾಶ || (ಭರತೇಶವೈಭವ).
ಪಿರಿಯಕ್ಕರ, ಗೀತಿಕೆ, ತ್ರಿಪದಿ, ಏಳೆ ಈ ಅಂಶವೃತ್ತಗಳಲ್ಲಿ ಯಾವುದಾದರೊಂದು ಮೂಲಕವಾಗಿ ಸಾಂಗತ್ಯ ಹುಟ್ಟಿರಬೇಕೆಂದು ವಿದ್ವಾಂಸರು ವಿಚಾರ ಮಾಡಿದ್ದಾರೆ. ಆದರೆ ವಾಸ್ತವವಾಗಿ ಯಾವುದೇ ಕನ್ನಡ ಛಂದಸ್ಸಿನ ಮೂಲದಿಂದ ಸಾಂಗತ್ಯದ ರೂಪಸಿದ್ದಿಯನ್ನು ತೃಪ್ತಿಕರವಾಗಿ ಸಾಧಿಸುವುದು ಕಷ್ಟ. ಜನಪ್ರಿಯವಾದ ತ್ರಿಪದಿಯ ಧಾಟಿ ಅದರ ಅವಿರ್ಭಾವದಲ್ಲಿ ಕೆಲಮಟ್ಟಿಗೆ ಪ್ರೇರಣೆ ಕೊಟ್ಟಿರಬಹುದು. ಸೊಬಗಿನ ಸೋನೆಯ ಮಟ್ಟಿನಲ್ಲಿ ಪ್ರತಿಯರ್ಧದ ಕೊನೆಗೆ ಬರುವ ವಿಷ್ಣುಗಣ ಕಾಲಕ್ರಮದಲ್ಲಿ ಆಲಾಪದ ಆವಶ್ಯಕತೆಗಾಗಿ ಬ್ರಹ್ಮಗಣವಾಗಿ ಮಾರ್ಪಟ್ಟು ಸ್ಥಿರಗೊಂಡು ಸಾಂಗತ್ಯವಾಗಿರಬಹುದೇನೋ.
ಅಚ್ಚಕನ್ನಡ ಛಂದಸ್ಸಿನ ಮಟ್ಟುಗಳಲ್ಲಿ ಈ ಮೇಲೆ ವಿವರಿಸಿದ ಪ್ರಸಿದ್ಧವೂ ಲಾಕ್ಷಣಿಕೋಕ್ತವೂ ಆದ ಕೆಲವು ಮಟ್ಟುಗಳು ಮಾತ್ರವಲ್ಲದೆ, ಜನಪದ ಸಾಹಿತ್ಯ ಹಾಗೂ ಯಕ್ಷಗಾನಾದಿಗಳಲ್ಲಿ ಇನ್ನೂ ಕೆಲವು ಮಟ್ಟುಗಳು-ತ್ಯಾಗಮಾನ, ಯಾಲಪದ ಮೊದಲಾದ ಹೆಸರಿನಲ್ಲಿ-ಕಂಡುಬರುತ್ತವೆ. ಇವುಗಳಲ್ಲಿ ಕೆಲವು ಅಂಶಗಣಗಳ ಕಟ್ಟಿನಲ್ಲಿ ನಡೆದರೆ ಇನ್ನು ಕೆಲವು ಮಾತ್ರಗಣಗಳ ಕಟ್ಟಿನಲ್ಲಿವೆ. ಈ ಬಗೆಯ ಸಾಹಿತ್ಯ ಸಂಗ್ರಹ ಸಮಗ್ರವಾಗಿ ನಡೆದು, ಅವುಗಳ ಛಂದಸ್ಸಿನ ಶಾಸ್ತ್ರೀಯ ಸಮಾಲೋಚನೆ ಇನ್ನೂ ನಡೆಯಬೇಕಾಗಿದೆ.
ಹೊಸಗನ್ನಡ ಛಂದಸ್ಸು
ಬದಲಾಯಿಸಿಕನ್ನಡದಲ್ಲಿ ಛಂದಸ್ಸು ನಡೆದು ಬಂದ ದಾರಿಯನ್ನು ಗುರುತಿಸಲು ಹೊರಟರೆ 19ನೆಯ ಶತಮಾನದವರೆಗೆ ಅದು ಸಂಪ್ರದಾಯದ ಜಾಡಿನಲ್ಲಿಯೇ ನಡೆಯುತ್ತ, ಆಗಾಗ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತ, ಅವನ್ನು ಬೆಳೆಸುತ್ತ, ಬಲಿಸುತ್ತ, ಹಳೆಯದನ್ನು ಆವರ್ತಗೊಳಿಸುತ್ತ, ಬಿಡುತ್ತ ಬಂದುದು ಕಾಣುತ್ತದೆ. 20ನೆಯ ಶತಮಾನದಲ್ಲಿ ಕಾಲಿಡುತ್ತಿದ್ದಂತೆ ಕನ್ನಡ ಕವಿತ್ವದ ಮೇಲೆ ಇಂಗ್ಲಿಷ್ ಕವಿತ್ವದ ಪ್ರಭಾವ ಹೊಸದಾಗಿ ಬಿದ್ದು ಹಲವು ಹೊಸರೀತಿಯ ಪ್ರಯೋಗಗಳೂ ಹಳೆಯದರ ಹೊಸ ರೂಪಗಳೂ ಅನುವಾದಗಳ ಮತ್ತು ಸ್ವತಂತ್ರ ಕೃತಿಗಳ ಮೂಲಕ ನಡೆಯಲಾರಂಭಿಸಿದುವು. ಭಾವದ ನಾನಾಸ್ಥಿತಿಗಳನ್ನು ಅವುಗಳ ಏರಿಳಿತಗಳಿಗೆ ತಕ್ಕಂತೆ ಸಮರ್ಥವಾಗಿ ಪ್ರತಿಬಿಂಬಿಸುವ ಬಗೆಬಗೆಯ ಧಾಟಿಗಳು ಹುಟ್ಟಿಕೊಂಡುವು. ಹೊಸಗನ್ನಡದ ಲಲಿತವಾದ ಮಾತುಗಾರಿಕೆಯನ್ನು ಬಳಸಿ, ವಿಶೇಷವಾಗಿ 3, 4 ಮತ್ತು 5 ಮಾತ್ರೆಗಳ ಗಣಗಳನ್ನು ಹೂಡಿ ನವೀನರೀತಿಯ ಚತುಷ್ಪದಿಗಳನ್ನೂ ಇತರ ಮಟ್ಟುಗಳನ್ನೂ ಕಟ್ಟುವುದು ರೂಢಿಗೆ ಬಂದಿತು. ತ್ರಿಪದಿ, ಷಟ್ಪದಿ, ಅಕ್ಕರ, ರಗಳೆ, ಸಾಂಗತ್ಯ-ಮುಂತಾದ ಹಳೆಯ ಛಂದಸ್ಸುಗಳು ಹೊಸ ರೂಪದಲ್ಲಿ ಕಾಣಿಸಿಕೊಂಡುವು. ಇಂಗ್ಲಿಷಿನ ಸಾನೆಟ್, ಬ್ಲ್ಯಾಂಕ್ವರ್ಸ್, ಓಡ್ ಮುಂತಾದವು ಅಷ್ಟಷಟ್ಪದಿ, ಸರಳರಗಳೆ, ಪ್ರಗಾಥಾ ಮುಂತಾದ ಆವಿಷ್ಕಾರಗಳನ್ನು ಪಡೆದುವು. ಬಿ. ಎಂ. ಶ್ರೀಕಂಠಯ್ಯನವರ ಇಂಗ್ಲಿಷ್ ಗೀತೆಗಳು, ಹಟ್ಟಿಯಂಗಡಿ ನಾರಾಯಣರಾಯರ ಆಂಗ್ಲಕವಿತಾಸಾರ, ಪಂಜೆ ಮಂಗೇಶರಾಯ ಮತ್ತು ಗೋವಿಂದ ಪೈ ಅವರ ಕವಿತೆಗಳು ಆರಂಭಕಾಲದ ಹೊಸ ಪ್ರಯೋಗಗಳನ್ನು ತೋರಿಸುತ್ತವೆ. ನುಡಿಗಳು, ಗಣಗಳು, ಪ್ರಾಸಯೋಜನೆ ಮೊದಲಾದವುಗಳಲ್ಲಿ ಸ್ವಯಂಚಾಲಿತವಾದ ಸ್ವಾತಂತ್ರ್ಯವಿದ್ದೂ ಕ್ರಮಬದ್ದತೆಯೂ ಇವುಗಳಲ್ಲಿ ಕಾಣುತ್ತದೆ. ಮುಖ್ಯವಾಗಿ ಇವು ಮಾತ್ರವೃತ್ತಗಳು ; ಆದರೆ ಉಚಿತಕ್ಕೆ ತಕ್ಕಂತೆ ಮಾತ್ರಾಪ್ರಮಾಣವನ್ನು ಹಿಗ್ಗಿಸುವುದು ಕುಗ್ಗಿಸುವುದು ಪಾದಾಂತ್ಯದಲ್ಲಿ ಒಂದು ಅಕ್ಷರವನ್ನೋ (ಮುಡಿ) ಎರಡು ಅಥವಾ ಮೂರು ಅಕ್ಷರಗಳನ್ನೊ (ಪದ್ಮಗಣ) ನಿಲ್ಲಿಸುವುದು-ಈ ಕೆಲವು ವೈಲಕ್ಷಣ್ಯಗಳು ಇಲ್ಲಿ ಕಾಣುತ್ತವೆ. ಇವುಗಳ ಬೇರುಗಳನ್ನು ಕೆಲಮಟ್ಟಿಗೆ ಹಳೆಯ ಛಂದಸ್ಸಿನಲ್ಲಿಯೇ ಗುರುತಿಸುವುದು ಸಾಧ್ಯ. ಹೀಗೆ ಸಂಪ್ರದಾಯ ಮತ್ತು ಪ್ರಗತಿ ಎರಡನ್ನೂ ಮೈಗೂಡಿಸಿಕೊಂಡು ಹೊಸಗನ್ನಡ ಛಂದಸ್ಸು ಮುನ್ನಡೆದಿದೆ.
ಈಗ ಸು. ಎರಡು ದಶಕಗಳಿಂದ ಹೊಸಗನ್ನಡ ಛಂದಸ್ಸು, ಎಲಿಯಟ್, ಡ್ರೈಡನ್ ಮೊದಲಾದ ಪಾಶ್ಚಾತ್ಯ ಕವಿಗಳ ಸ್ವಚ್ಛಂದ ಛಂದೋವಿಲಾಸದ ರೀತಿನೀತಿಗಳನ್ನು ರೂಢಿಸಿಕೊಂಡು ಇನ್ನೂ ಹೆಚ್ಚು ಹೆಚ್ಚಾಗಿ ಹೊಸ ರೂಪರೇಖೆಗಳನ್ನು ಪಡೆದುಕೊಳ್ಳುತ್ತಿದೆ. ಪಾದ ಸಂಖ್ಯೆ, ಲಯಗತಿ, ಗಣನಿಯಮ, ಪ್ರಾಸಯೋಜನೆ ಇವು ಮೊದಲಿಗಿಂತ ಹೆಚ್ಚು ಸಡಿಲುತ್ತ ಬದಲುತ್ತ ಬಂದಿವೆ. ರಸದೃಷ್ಟಿಯನ್ನುಳ್ಳ, ಲಯನಿಷ್ಠೆಯನ್ನು ಬಂiÀÄಸುವ, ಶ್ರುತಿಮಧುರವೂ ಭಾವಗಮ್ಯವೂ ಆದ ತಾಳಮಾನತೆ, ಗೇಯಗೀತೆಗಳಿಗಿಂತ, ಚಿಂತನ ದೃಷ್ಟಿಯನ್ನುಳ್ಳ ವಚೋನಿಷ್ಠೆಯನ್ನು ಬಂiÀÄಸುವ ಬುದ್ಧಿಗಮ್ಯವಾದ ವಾಚ್ಯತೆ, ನವೋನವವಾದ ಪ್ರಯೋಗಾಕಾಂಕ್ಷೆ-ಇವು ಈಚಿನ ಕನ್ನಡ ಕವಿತೆಯ ಛಂದಸ್ಸಿನಲ್ಲಿ ಕಾಣುತ್ತದೆ. ಇದಕ್ಕೆ ಹಿಂದಿನ ಛಂದಸ್ಸು ಕೂಡ ಇದರ ಜೊತೆಯಲ್ಲಿ ಸಾಗುತ್ತಿದೆ. ಬಿ. ಎಂ. ಶ್ರೀ. ಕೆ, ಎಸ್. ನ, ಪುತಿನ, ಕುವೆಂಪು ಮೊದಲಾದವರು ಅನೇಕ ಬಗೆಯ ಗೇಯಗೀತೆಗಳಲ್ಲಿ ವೈವಿಧ್ಯವನ್ನು ಕೊಟ್ಟಿದ್ದಾರೆ. ಕುವೆಂಪು ಅವರಂತೂ ಸರಳರಗಳೆಯನ್ನು ಯುಕ್ತವಾಗಿ ಮಾರ್ಪಡಿಸಿಕೊಂಡು ತಮ್ಮ ರಾಮಾಯಣದರ್ಶನ ಮಹಾಕಾವ್ಯದಲ್ಲಿ ಮಹಾಛಂದಸ್ಸನ್ನಾಗಿಸಿದ್ದಾರೆ. ಗೋಪಾಲಕೃಷ್ಣ ಅಡಿಗರು, ಚೆನ್ನವೀರ ಕಣವಿ, ಎ. ಕೆ. ರಾಮಾನುಜನ್, ಚಂದ್ರಶೇಖರ ಕಂಬಾರ, ಲಂಕೇಶ ಮೊದಲಾದವರು ಛಂದಸ್ಸಿನ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ. ಗೋಕಾಕರಿಂದ ಪ್ರಾರಂಭವಾದ ಮುಕ್ತಛಂದಸ್ಸಿನ ವೈವಿದ್ಯಗಳನ್ನು ಒಂದು ಕಡೆ ಬೆಳೆಸಲಾಗುತ್ತಿದೆ.
ಹೊಸಗನ್ನಡ ಛಂದಸ್ಸಿನ ಒಂದು ನುಡಿ, ಮೊದಲು ತಾಯ ಹಾಲ ಕುಡಿದು, ಲಲ್ಲೆಯಿಂದ ತೊದಲಿ ನುಡಿದು, ಕೆಳೆಯರೊಡನೆ ಬೆಳೆದು ಬಂದ ಮಾತದಾವುದು- ನಲ್ಲೆಯೊಲವ ತೆರೆದು ತಂದ ಮಾತದಾವುದು- (ಶ್ರೀ-ಕಾಣಿಕೆ)
ಸ್ವಚ್ಛಂದ ಛಂದಸ್ಸಿನಲ್ಲಿಯ ಕವನದ ಮೊದಲ ಎಂಟು ಸಾಲುಗಳು : ಹೊಗೆ, ಬೆಂಕಿ, -ಅಯ್ಯೋ ಹಾಳಾಗ- ಉರಿ, ಶಖೆ, ತಾಪ ; ಹೊರಗೆ ರಣರಣ ಬಿಸಿಲು, ಒಳಗೆ ಮಾರಣ ಬೆಂಕಿ. ಮಲಗಿತ್ತು ಮನ ಚಿತೆಯ ಮೇಲೆ ಆಫೀಸಿನಲಿ, ಭೂತಗನ್ನಡಿ ಬಿಸಿಲುಮಚ್ಚು ಚುಚ್ಚಿತು ತಲೆಯ ; ಮಿದುಳು-ಬಚ್ಚಲ ಹಂಡೆಯಲ್ಲಿ ಬೇಯುವ ಆಮೆ- ಎದ್ದೆದ್ದು ಬಿದ್ದು ಒದ್ದಾಡುತ್ತಿತ್ತು. (‘ಹಿಮಗಿರಿಯ ಕಂದರ ‘ - ಎಂ. ಗೋಪಾಲಕೃಷ್ಣ ಅಡಿಗ)
ಅಂತೂ ಕನ್ನಡ ಛಂದಸ್ಸು ನಿಂತ ನೀರಾಗಿರದೆ ಹೊಸ ಹೊಸ ಆವಿಷ್ಕಾರಗಳನ್ನು ಪಡೆಯುತ್ತ ನಡೆಯುತ್ತಿರುವ ಒಂದು ಜೀವಂತ ಭಾವವಾಹಕ ಶಕ್ತಿಯಾಗಿದೆಯೆಂದು ತಿಳಿಯಬಹುದು. (ಟಿ.ವಿ.ವಿ.; ಡಿ.ಎಸ್.ಕೆ.)