ನಂದಿಧ್ವಜ ಕುಣಿತ

ಬದಲಾಯಿಸಿ

ನಂದಿಧ್ವಜವನ್ನು ನಂದೀಕಂಬ, ನಂದೀಕೋಲು, ಬಿರಡೆಕಂಬ, ವ್ಯಾಸಗೋಲು, ನಂದೀಪಟ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಸದ್ಯಕ್ಕೆ ಕರ್ನಾಟಕದಲ್ಲಿ ವೀರಶೈವರು, ನಾಯಕರು, ಮೈಸೂರು ಅರಸ ಸಂಬಂಧಿಗಳು ಹಾಗೂ ಇತರೇ ಕೆಲವು ವೀರ ಮನೆತನಗಳು ಧಾರ್ಮಿಕ ಉತ್ಸವಗಳ ಸಂದರ್ಭದಲ್ಲಿ ಈ ನಂದಿಧ್ವಜವನ್ನು ಪ್ರದರ್ಶಿಸುತ್ತಾರೆ. ವೀರಶೈವರ ಪ್ರಕಾರ ಇದು ವೀರಭದ್ರನು ತನ್ನ ವಿರೋಧಿಯಾದ ದಕ್ಷಬ್ರಹ್ಮನ ಮೇಲೆ ಸಾಧಿಸಿದ ವಿಜಯದ ಸಂಕೇತವಾದರೆ, ನಾಯಕ ಜನಾಂಗದವರಿಗೆ ತಮ್ಮ ಸಾಂಸ್ಕೃತಿಕ ವೀರನಾದ ನಾಯ್ಕನಹಟ್ಟಿಯ ತಪ್ಪೇಸ್ವಾಮಿಯ ಸಂಕೇತ. ಹಾಗೆಯೇ ದಸರಾ ಉತ್ಸವದಲ್ಲಿ ಪ್ರದರ್ಶಿಸಲಾಗುವ ಮೈಸೂರಿನ ಬೃಹತ್ ನಂದೀಕಂಬ ಯದುವಂಶದ ಅರಸರ ವಿಜಯದ ಸಂಕೇತ ಎಂದು ಹೇಳಲಾಗುತ್ತದೆ.[]

ವೇಷಭೂಷಣ

ಬದಲಾಯಿಸಿ

ನಂದೀಕಂಬ ಹೊತ್ತು ಕುಣಿಯುವವನು ಗಂಡುಗಚ್ಚೆ ಹಾಕಿ ದೋತ್ರ ಧರಿಸಿರುತ್ತಾನೆ. ತಲೆಗೆ ಪೇಟ, ಹಣೆಗೆ ವಿಭೂತಿ, ಕಾಲಿಗೆ ಗೆಜ್ಜೆ, ನಂದೀಕಂಬವನ್ನು ಹಿಡಿದಿಟ್ಟುಕೊಳ್ಳುವ ಹೆಗಲಿಗೆ ಹಾಕಿದ ನವಾರ ಇವಿಷ್ಟು ಕುಣಿತಗಾರನ ವೇಷಭೂಷಣ, ನಂದೀಕಂಬದ ಕಲಾವಿದ ಬಲಿಷ್ಠ ದೇಹವುಳ್ಳವನಾಗಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಈ ಕುಣಿತದ ಹಿನ್ನೆಲೆಗೆ ಕರಡೆ, ಡೊಳ್ಳು, ಚಮಾಳ, ತಾಳ ಮತ್ತು ಶಹನಾಯಿ ಅಥವಾ ನಾಗಸ್ವರಗಳಿರುತ್ತವೆ. ಈ ಕುಣಿತಕ್ಕೆ ಸಾಮಾನ್ಯವಾಗಿ ತಮಟೆ ನಗಾರಿಗಳನ್ನು ಬಳಸಲಾಗುವುದಿಲ್ಲ. ಬೆಟ್ಟಕ್ಕೆ ಹೋಗಿ ಸುಮಾರು ಹದಿನೆಂಟರಿಂದ ಇಪ್ಪತ್ತು ಅಡಿ ಎತ್ತರದ ಗಟ್ಟಿಮುಟ್ಟಾದ ಬಿದಿರುಕಂಬವನ್ನು ಶುಭ ಮುಹೂರ್ತದಲ್ಲಿ ಕಡಿದು ತರಲಾಗುತ್ತದೆ. ನಂತರ ಅದನ್ನು ದೇವಸ್ಥಾನದ ಆವರಣದಲ್ಲಿ ನೆಲಕ್ಕೆ ಸೇರದಂತೆ ಮಡಿಯಲ್ಲಿ ಇಡಲಾಗುತ್ತದೆ. ಕೆಳಗಿನ ತಾಳುಗಂಬಕ್ಕೆ ಪುಟ್ಟ ಮಂಟಪದಂತೆ ಪೀಠವನ್ನು ರಚಿಸಲಾಗುತ್ತದೆ. ಅದರ ಮೇಲೆ ಹಿತ್ತಾಳೆಯ ನಂದಿಯನ್ನು ಕೂರಿಸಲಾಗುತ್ತದೆ. ಈ ಪೀಠಕ್ಕೆ ಹಿತ್ತಾಳೆ ಗಗ್ಗರವನ್ನು ಸೇರಿಸಲಾಗುತ್ತದೆ. ಕುಣಿಯುವಾಗ ಗಗ್ಗರದ ನಿಯತವಾದ ಸದ್ದು ಕೇಳಲು ಸುಮಧುರವಾಗಿರುತ್ತದೆ. ಗಗ್ಗರದ ಮೇಲೆ ರೀತಿಯ ಸದ್ದು ಮಾಡುವ ಹಿತ್ತಾಳೆಯ ಎರಡು ಬಳೆಗಳೂ ಇರುತ್ತವೆ. ಇದನ್ನು ಕೊಳಗ ಎಂದು ಕರೆಯಲಾಗುತ್ತದೆ. ಈ ಕೊಳಗ ಮತ್ತು ಗಗ್ಗರಗಳ ನಡುವೆ ಛತ್ರಿಯಾಕಾರದ ತಗಡುಗಳ ಜಾಲರಿ ಇರುತ್ತದೆ. ಜಾಲರಿಯ ಛತ್ರಿಗೆ ಸುತ್ತಲೂ ತಗಡಿನ ಲೋಲಾಕುಗಳಿರುತ್ತವೆ. ಈ ರೀತಿಯ ಗಗ್ಗರ, ಬಳೆ ಮತ್ತು ಜಾಲರಿಗಳ ಸಾಲು ಕಂಬದ ಸುಮಾರು 15 ಅಡಿ ಎತ್ತರವನ್ನು ವ್ಯಾಪಿಸುತ್ತವೆ. ಇವುಗಳ ಮೇಲಿನ ಭಾಗದ ಬಿದಿರು ಮರವನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ಸುತ್ತಲಾಗುತ್ತದೆ. ತುದಿಯಲ್ಲಿ ಕಾವಿಬಣ್ಣದ ಸಣ್ಣ ಧ್ವಜಗಳಿರುತ್ತವೆ. ಧ್ವಜದ ತುದಿಗೆ ರೇಷ್ಮೆದಾರದ ಕುಚ್ಚಿನ ಅಲಂಕಾರ ಇರುತ್ತದೆ. ನಂದೀಕಂಬದ ತುತ್ತತುದಿಗೆ ಒಂದು ಪುಟ್ಟ ಛತ್ರಿ ಇರುತ್ತದೆ. ಛತ್ರಿಯ ಸುತ್ತ ಲೋಲಾಕುಗಳಿರುತ್ತೆ. ಇದನ್ನು ಕಲಶ ಎಂದು ಕರೆಯಲಾಗುತ್ತದೆ.[]

ಪ್ರಕಾರಗಳು

ಬದಲಾಯಿಸಿ

ನಂದೀಕಂಬದ ಕುಣಿತ ಅದರ ಎತ್ತರ ಮತ್ತು ಭಾರದ ಕಾರಣಕ್ಕಾಗಿ ಅಷ್ಟು ಸಲೀಸಲ್ಲ. ಹೀಗಾಗಿ ಅದನ್ನು ಕುಣಿಯುವುದು ಒಂದು ರೀತಿಯ ಶಕ್ತಿ ಪ್ರದರ್ಶನವೂ ಹೌದು. ಅಲ್ಲದೆ, ಕುಣಿಯುವಾಗ ಯಾವ ಕಾರಣಕ್ಕೂ ನಂದೀಕಂಬ ಬೀಳಬಾರದು. ಬಿದ್ದರೆ ಅದು ಅಶುಭ ಸೂಚಕ ಮತ್ತು ಅನಾಹುತದ ಸಂಕೇತ ಕೂಡ. ಈ ಕಾರಣದಿಂದ ನಂದೀಕಂಬ ಹೊತ್ತು ಕುಣಿಯುವ ಕಲಾವಿದ ಕೇವಲ ಶಕ್ತಿವಂತನಷ್ಟೇ ಅಲ್ಲ, ಯುಕ್ತಿವಂತನೂ ಆಗಿರಬೇಕಾಗುತ್ತದೆ. ನಂದೀಕಂಬದ ಕುಣಿತದಲ್ಲಿ ಒಂದ್ಹೆಜ್ಜೆ, ಎರಡ್ಹೆಜ್ಜೆ, ಮೂರೆಜ್ಜೆ, ನಾಲ್ಕೆಜ್ಜೆ, ದೌಡಹೆಜ್ಜೆ, ಚಿಕ್ಕೆಹೆಜ್ಜೆ, ಮಧ್ಯಹೆಜ್ಜೆ, ತಟ್ಟಿಹೆಜ್ಜೆ ಮುಂತಾದ ಹಲವು ಪ್ರಕಾರಗಳಿವೆ.

ಉಲ್ಲೇಖ

ಬದಲಾಯಿಸಿ
 ಕರ್ನಾಟಕ ಜನಪದ ಕಲೆಗಳ ಕೋಶ- ಡಾ. ಹಿ ಚಿ ಬೋರಲಿಂಗಯ್ಯ