ಲೈಫೈ
ಲೈಫೈ (Li-Fi ಅಥವಾ ಲೈಟ್ ಫಿಡೆಲಿಟಿ) ಎಂಬುದು ಒಂದು ಬಗೆಯ ನಿಸ್ತಂತು ಸಂವಹನ ತಂತ್ರಜ್ಞಾನ (Wireless communication technology). ಎರಡೂ ದಿಕ್ಕುಗಳಲ್ಲಿ, ತೀವ್ರ ಗತಿಯಲ್ಲಿ ಸಂವಹನ ಸಾಧಿಸಲು ಅನುಕೂಲಕರ. ಜನಪ್ರಿಯ ನಿಸ್ತಂತು ಸಂವಹನ ತಂತ್ರಜ್ಞಾನವಾದ (Wi-Fi) ಎಂಬ ತಂತ್ರಜ್ಞಾನವನ್ನು ಇದು ಹೋಲುತ್ತದೆ. ಪ್ರೊ| ಹರಾಲ್ಡ್ ಹಾಸ್ (Harald Haas) ಎಂಬುವರು ಲೈಫೈ ತಂತ್ರಜ್ಞಾನದ ಅಧ್ವರ್ಯು. ಲೈಫೈ ತಂತ್ರಜ್ಞಾನವನ್ನು ದ್ಯುತಿ ಸಂವಹನ ತಂತ್ರಜ್ಞಾನದ (Optical communication) ಭಾಗವೆಂದು ಪರಿಗಣಿಸಲಾಗುತ್ತದೆ; ರೇಡಿಯೋ ಕಂಪನಾಂಕ ಸಂವಹನವನ್ನು ಬಳಸುವ ವೈಫೈ ತಂತ್ರಜ್ಞಾನಕ್ಕೆ ಲೈಫೈ ಒಂದು ಸೋದರ ತಂತ್ರಜ್ಞಾನ.
ತಂತ್ರಜ್ಞಾನದ ವಿವರಗಳು
ಬದಲಾಯಿಸಿಒಂದು ಬೆಳಗುವ ಬಲ್ಬನ್ನು ಹತ್ತಿಸಿ-ಆರಿಸಿ ಸಂಕೇತಗಳನ್ನು ಕಳಿಸಬಹುದು. ಲೈಫೈ(Li-Fi) ತಂತ್ರಜ್ಞಾನದಲ್ಲಿ ಬೆಳಕು ಬೀರುವ ಸಾಧನವನ್ನು ಸೆಕೆಂಡಿಗೆ ಹಲವು ನೂರು ಕೋಟಿ ಸಲ ಹತ್ತಿಸಿ-ಆರಿಸಬೇಕು. ಹೀಗಾಗಿ ಬಲ್ಬ್ ಹತ್ತಿತು/ಆರಿತು ಎಂಬುದು ಮನುಷ್ಯರ ಕಣ್ಣಿಗೆ ಗೋಚರಿಸುವುದಿಲ್ಲ. ಆದ್ದರಿಂದ ನಮ್ಮ ಕಣ್ಣಿಗೆ ಗೋಚರಿಸದ ಮಟ್ಟಕ್ಕೆ ಬೆಳಕನ್ನು ಮಂಕುಗೊಳಿಸಿದರೂ ಈ ತಂತ್ರಜ್ಞಾನದಲ್ಲಿ ಬಾಧಕವಿಲ್ಲ. ಬೆಳಕಿನ ಸ್ರೋತ ಮತ್ತು ಬೆಳಕಿನ ರಿಸೀವರ್‍ಗಳು ಒಂದು ನೇರವಾದ ಗೆರೆಯ ಎರಡು ತುದಿಗಳಲ್ಲಿ ಇರಬೇಕೆಂದೇನೂ ಇಲ್ಲ – ಬೆಳಕು ಗೋಡೆಗಳಿಂದ ಪ್ರತಿಫಲಿತವಾಗಿಯೂ ಮುಟ್ಟಬಹುದು. ಇಷ್ಟಾದರೂ ಪ್ರತಿ ಸೆಕೆಂಡಿಗೆ 7 ಕೋಟಿ ಬಿಟ್ಸ್ ವೇಗದಲ್ಲಿ ಸಂವಹನ ಸಾಧ್ಯ. ವೈಫೈ ತಂತ್ರಜ್ಞಾನಕ್ಕೆ ಹೋಲಿಸಿದರೆ ಲೈಫೈ ಸಂವಹನವು ಗೋಡೆಗಳನ್ನು ಹಾದುಹೋಗಲಾರದು. ಆದರೆ ಇದೇ ಕಾರಣಕ್ಕಾಗಿ ಲೈಫೈ ತಂತ್ರಜ್ಞಾನವು “ಹ್ಯಾಕರ್”ಗಳಿಂದ ಸುರಕ್ಷಿತ. ಲೈಫೈ ತಂತ್ರಜ್ಞಾನದಲ್ಲಿ ಬಳಸಲಾಗುವ ಬೆಳಕು ಇವುಗಳಲ್ಲಿ ಯಾವುದೇ ಒಂದಾಗಿರಬಹುದು.
- ಕಣ್ಣಿಗೆ ಕಾಣುವ ಬೆಳಕು (Visible LIGHT)
- ಕಣ್ಣಿಗೆ ಕಾಣದ ಅವಗೆಂಪು ಬೆಳಕು (infrared light)
- ಕಣ್ಣಿಗೆ ಕಾಣದ ಅತಿನೇರಳೆ ಬೆಳಕು (ultraviolet light).
ಬೆಳಕು ಬೀರುವ ಡಯೋಡ್(Diode) ಅಥವಾ ಎಲ್‍ಇಡಿ(LED) ಎಂಬ ಸಾಧನಗಳು ಈ ತಂತ್ರಜ್ಞಾನದಲ್ಲಿ ಉಪಯುಕ್ತವಾಗುತ್ತವೆ. ವಿಮಾನ, ಆಸ್ಪತ್ರೆ, ಅಣುಸ್ಥಾವರ ಮೊದಲಾದ ಕಡೆಗಳಲ್ಲಿ ವಿದ್ಯುತ್-ಕಾಂತೀಯ ಅಲೆಗಳ ಸಂವಹನದಿಂದ ಅಪಾಯ ಉಂಟಾಗಬಹುದು. ಇಂಥ ಕಡೆಗಳಲ್ಲಿ ಲೈಫೈ ತಂತ್ರಜ್ಞಾನವು ಸಂವಹನದ ಕೊರತೆಯನ್ನು ತುಂಬಿಕೊಡಬಲ್ಲದು. ಬೆಲೆಯನ್ನು ಹೋಲಿಸಿದರೆ ಲೈಫೈ ತಂತ್ರಜ್ಞಾನವು ವೈಫೈಗಿಂತ ಹತ್ತು ಪಟ್ಟು ಅಗ್ಗ. ಲೈಫೈ ತಂತ್ರಜ್ಞಾನದ ಮಿತಿಗಳೆಂದರೆ:
- ಅಪಾರದರ್ಶಕ ವಸ್ತುಗಳನ್ನು ಬೆಳಕು ದಾಟಲಾರದ ಕಾರಣ ಹೆಚ್ಚು ಅಂತರದ ದೂರಸಂವಹನ ಸಾಧ್ಯವಿಲ್ಲ
- ವೈಫೈನಷ್ಟು ಈ ಸಂವಹನ ವಿಶ್ವಸನೀಯವಲ್ಲ
- ಪ್ರತಿಷ್ಠಾಪನೆಯ ಬೆಲೆ ಹೆಚ್ಚು
ಲೈಫೈ ತಂತ್ರಜ್ಞಾನದ ಉಪಯೋಗವು ೨೦೧೩ರಿಂದ ೨೦೧೮ರ ವರೆಗೆ ಪ್ರತಿವರ್ಷವೂ ೮೨% ಬೆಳೆದು ೬೦೦ ಕೋಟಿ ಡಾಲರ್ ಮೌಲ್ಯವನ್ನು ಮುಟ್ಟುವ ನಿರೀಕ್ಷೆಯಿದೆ. ಪ್ಯೂರ್ ಲೈಫೈ [೧] ಎಂಬ ಕಂಪನಿ ೨೦೧೪ರಲ್ಲಿ ಈ ತಂತ್ರಜ್ಞಾನವನ್ನು ವ್ಯಾಪಾರ ಮಾಡಲು ಪ್ರಾರಂಭಿಸಿದ ಮೊದಲ ಸಂಸ್ಥೆ.
ಇತಿಹಾಸ
ಬದಲಾಯಿಸಿಎಡಿನ್ ಬರ್ಗ್ ವಿಶ್ವವಿದ್ಯಾಲಯದ ಪ್ರೊ| ಹೆರಾಲ್ಡ್ ಹಾಸ್ ಅವರನ್ನು ಲೈಫೈ ತಂತ್ರಜ್ಞಾನದ ಮೂಲಪುರುಷ ಎಂದು ಪರಿಗಣಿಸಲಾಗುತ್ತದೆ. ಅವರೇ ಈ ತಂತ್ರಜ್ಞಾನಕ್ಕೆ ಲೈಫೈ ಎಂದು ನಾಮಕರಣ ಮಾಡಿದವರು. ಪ್ಯೂರ್ ಲೈಫೈ ಎಂಬ ಕಂಪನಿಯನ್ನು ಹುಟ್ಟುಹಾಕಿದವರೂ ಅವರೇ. ಅವರು 2011ರಲ್ಲಿ ಟೆಡ್ ಗ್ಲೋಬಲ್ (TED GLOBAL) ಸಂಸ್ಥೆಯ ಮೂಲಕ ನೀಡಿದ ಉಪನ್ಯಾಸ ಜನಪ್ರಿಯವಾಯಿತು[೨]. 2011ರ ಅಕ್ಟೋಬರ್ ತಿಂಗಳಲ್ಲಿ "ಲೈಫೈ ಕನ್ಸಾರ್ಷಿಯಮ್" ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು[೩]; ಅನೇಕ ಕಂಪನಿಗಳು ಈ ಸಂಸ್ಥೆಯ ಸದಸ್ಯತ್ವ ಪಡೆದುಕೊಂಡವು. 2013ರ ಆಗಸ್ಟ್ ತಿಂಗಳಲ್ಲಿ ಒಂದೇ ಬಣ್ಣದ ಎಲ್‍ಇಡಿ (LED) ಲೈಫೈ ಸಂವಹನಬಳಸಿ ಸೆಕೆಂಡಿಗೆ 160 ಕೋಟಿ ಬಿಟ‍್‍ಗಳ ವೇಗದ ಸಂವಹನ ಸಾಧಿಸಲಾಯಿತು. ಚೈನಾ ದೇಶದ ಕೆಲವು ಕಂಪನಿಗಳು ಲೈಫೈ ಸಂಬಂಧಿ “ಕಿಟ್” ಗಳನ್ನು ತಯಾರಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡವು[೪]. ಏಪ್ರಿಲ್ 2014ರಲ್ಲಿ ಸ್ಟಿನ್ಸ್ ಕೋಮನ್ ಎಂಬ ರಷ್ಯಾ ದೇಶದ ಒಂದು ಕಂಪನಿ ಕೂಡಾ ಲೈಫೈ ತಂತ್ರಜ್ಞಾನ ಬೆಳೆಸುವುದರಲ್ಲಿ ಆಸಕ್ತಿ ತೋರಿತು. ಮೆಕ್ಸಿಕೋ ದೇಶದ ಸೈಸಾಫ್ಟ್ ಎಂಬ ಕಂಪನಿ ಕೂಡಾ ಅದೇ ವರ್ಷ ಲೈಫೈ ತಂತ್ರಜ್ಞಾನದಲ್ಲಿ ಸಾಧನೆ ಪ್ರಕಟಿಸಿತು[೫].
ಮಾನದಂಡಗಳು
ಬದಲಾಯಿಸಿಲೈಫೈ ಸಂವಹನದಲ್ಲಿ IEEE 802.11 ನಿಯಮಗಳನ್ನು ಅನುಸರಿಸಲಾಗುತ್ತದೆ. ಕಣ್ಣಿಗೆ ಗೋಚರಿಸುವ ಬೆಳಕನ್ನು ಸಂವಹನದಲ್ಲಿ ಬಳಸಲಾಗುತ್ತದೆ ಎಂಬ ಕಾರಣದಿಂದ IEEE ಸಂಸ್ಥೆಯ 802 ಕಾರ್ಯಕಾರಿ ಸಮಿತಿಯು 802.15.7 ಎಂಬ ನಿಯಮಾವಳಿ ರೂಪಿಸಿತು. ಇದಕ್ಕೆ ವಿಸಿಬಲ್ ಲೈಟ್ ಕಮ್ಯೂನಿಕೇಶನ್(VLC) ಎನ್ನುತ್ತಾರೆ. ಈ ಬಗೆಯ ಸಂವಹನ ಬಳಸಿ 2014ರ ಜನವರಿಯಲ್ಲಿ ಪ್ರಥಮ ಬಾರಿಗೆ ಒಂದು ಸ್ಮಾರ್ಟ್ ಫೋನ್ ಪ್ರದರ್ಶಿಸಲಾಯಿತು ([೬]). ಈ ಬಗೆಯ ಸ್ಮಾರ್ಟ್ ಫೋನುಗಳಲ್ಲಿ ಬೆಳಕನ್ನು ವಿದ್ಯುತ್ ಚೈತನ್ಯವಾಗಿ ಪರಿವರ್ತಿಸುವ ತಂತ್ರಜ್ಞಾನ ಅಳವಡಿಸಲಾಗಿದೆ[೭]. ಇದರಿಂದ ಫೋನುಗಳ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಫಿಲಿಪ್ಸ್ ಲೈಟಿಂಗ್ ಕಂಪನಿ ವಿಎಲ್‍ಸಿ (VLC) ತಂತ್ರಜ್ಞಾನ ಬಳಸಿ ಅಂಗಡಿಗಳಲ್ಲಿ ಗ್ರಾಹಕರು ಬಳಸಬಹುದಾದ ವ್ಯವಸ್ಥೆಯನ್ನು ರೂಪಿಸಿದೆ[೮]. ಇದಕ್ಕಾಗಿ ಗ್ರಾಹಕರು ತಮ್ಮ ಫೋನಿಗೆ ಒಂದು ಆಪ್ ಇಳಿಸಿಕೊಳ್ಳಬೇಕು. ಈ ಆಪ್ ಅಂಗಡಿಯಲ್ಲಿ ಪ್ರತಿಷ್ಠಾಪಿಸಿದ ಎಲ್‍ಇಡಿಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ಗ್ರಾಹಕರಿಗೆ ಅವರು ನಿಂತಿದ್ದ ಕಡೆಗೇ ಆಯಾ ಸಾಲಿನಲ್ಲಿ ಮಾರಾಟಕ್ಕಿಟ್ಟಿರುವ ಪದಾರ್ಥಗಳಿಗೆ “ಡಿಸ್ಕೌಂಟ್ ಕೂಪನ್”ಗಳನ್ನು ತಲುಪಿಸುವುದು ಈ ವ್ಯವಸ್ಥೆಯ ಉದ್ದೇಶ.
ಹೆಚ್ಚಿನ ಮಾಹಿತಿ
ಬದಲಾಯಿಸಿ- ಮುಕ್ತ ವ್ಯೋಮ ಸಂವಹನ (Free-space optical communication)
- ಅವಕೆಂಪು ಸಂವಹನ (Infrared communication)
- ಬ್ಲೂ ಟೂತ್ (ಬ್ಲ್ಯೂಟೂತ್, Bluetooth)
- ಸೂಪರ್ ವೈಫೈ (Super Wi-Fi)
- ಐಆರ್ಡಿಎ ಸಂವಹನ (IrDA)
ಉಲ್ಲೇಖ
ಬದಲಾಯಿಸಿ- ↑ ಪ್ಯೂರ್ ಲೈಫೈ
- ↑ ಟೆಡ್ ಡಾಟ್ ಕಾಮ್ ಸಂಸ್ಥೆಯಲ್ಲಿ ಹೆರಾಲ್ಡ್ ಹಾಸ್ ಅವರ ಭಾಷಣ
- ↑ "ಲೈಫೈ ಕನ್ಸಾರ್ಷಿಯಮ್". Archived from the original on 2018-01-04. Retrieved 2015-12-19.
- ↑ "ಚೈನಾ ದೇಶದ ಕಂಪನಿಗಳಿಂದ ಲೈಫೈ ಕಿಟ್ ತಯಾರಿ". Archived from the original on 2016-03-05. Retrieved 2015-12-19.
- ↑ ಸೈಸಾಫ್ಟ್, ಮೆಕ್ಸಿಕೋ
- ↑ "ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋ, ಲಾಸ್ ವೇಗಸ್, ಅಮೆರಿಕಾ ಸಂಯುಕ್ತ ಸಂಸ್ಥಾನ". Archived from the original on 2015-12-18. Retrieved 2015-12-19.
- ↑ ಸ್ಮಾರ್ಟ್ ಫೋನಿನಲ್ಲಿ ಲೈಫೈ ಬಳಕೆ
- ↑ ಲೈಫೈ ಬಳಸಿ ಫಿಲಿಪ್ಸ್ ಕಂಪನಿಯ ಪ್ರಯೋಗ